ಬೆಂಗಳೂರು: ಕಳೆದ ಮೂರು-ನಾಲ್ಕು ತಿಂಗಳಿನಿಂದ ನೀರಿಲ್ಲದೇ ಬೆಂಗಳೂರಿಗರು ಬೇಸತ್ತು ಹೋಗಿದ್ದಾರೆ. ನೀರಿಲ್ಲದೇ ಜನ ಜೀವನವೇ ಬದಲಾಗಿದೆ.
ಆದರೆ ಇದೀಗ ಹವಾಮಾನ ಇಲಾಖೆಯ ವರದಿ ಕೊಂಚ ಸಮಾಧಾನ ಮೂಡಿಸುವಂತಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಈ ಬಾರಿ ನೀರಿಲ್ಲದೇ ಬೇಸಿಗೆ ತುಸು ದೀರ್ಘವೆನಿಸಿತ್ತು. ವಿಪರೀತ ಉರಿಬಿಸಿಲು ಮನುಷ್ಯರು ಮಾತ್ರವಲ್ಲ, ಸಸ್ಯ, ಪ್ರಾಣಿ ಸಂಕುಲಗಳಿಗೂ ಭಾರೀ ತೊಂದರೆಯಾಗಿದೆ.
ಕಳೆದ ಬಾರಿ ವಾಡಿಕೆಯಂತೆ ಮಳೆಯಾಗದಿರುವುದೇ ನೀರಿನ ಕೊರತೆಗೆ ಕಾರಣ. ಅದರಲ್ಲೂ ಬೆಂಗಳೂರಿನಲ್ಲಿ ಮಳೆಯಾಗಿದ್ದೇ ಕಡಿಮೆ. ಈ ಬಾರಿ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 85.2 ಸೆಂ.ಮೀ. ನಷ್ಟಿರಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಬಾರಿ ಸುದೀರ್ಘ ಅವಧಿಯ ಮಳೆಯಾಗಲಿದೆ.
ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಬೇಸಿಗೆ ಮಳೆಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕರ್ನಾಟಕದ ಕೆಲವೆಡೆ ವರುಣನ ಆಗಮನವಾಗಿತ್ತು. ಹಾಗಿದ್ದರೂ ಬೇಸಿಗೆಯ ದಗೆ ಕಡಿಮೆಯಾಗಿಲ್ಲ. ಏಪ್ರಿಲ್ 18 ರ ನಂತರ ಮತ್ತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
ವಿಶೇಷವೆಂದರೆ ಈ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಕೂಡಾ ಸೇರಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಕೊಂಚ ಮೋಡ ಕವಿದ ವಾತಾವರಣದಂತಿತ್ತು. ಇದೀಗ ಮಳೆಯಾಗುವ ಸೂಚನೆ ಸಿಕ್ಕಿದೆ.