Publish Date: Mon, 22 Dec 2025 (18:14 IST)
Updated Date: Mon, 22 Dec 2025 (18:18 IST)
ಹುಬ್ಬಳ್ಳಿ: ರೈಲ್ವೆ ಟಿಕೆಟ್ ದರ ಹೆಚ್ಚಳ ಸಂಬಂಧ ವಿಪಕ್ಷಗಳು ಟೀಕೆ ಮಾಡುತ್ತಿರುವ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕಿಲೋ ಮೀಟರ್‌ಗೆ ಒಂದು ಪೈಸೆ ಮಾತ್ರ ಹೆಚ್ಚಾಳವಾಗಿದೆಯೆಂದರು.
ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಾನು ವಿರೋಧ ಪಕ್ಷದಲ್ಲಿದ್ದಾಗ ರೈಲ್ವೆ ಟಿಕೆಟ್ ದರ ಹೆಚ್ಚಳ ಆಗಿದ್ದಕ್ಕೆ ಲೋಕಸಭೆಯಲ್ಲಿ ಮಾತಾಡಿದ್ದೆ. ಇದೀಗ ಕೇವಲ ಕಿ.ಮೀಗೆ ಒಂದು ಪೈಸೆ ಹೆಚ್ಚಾಗಿದೆ ಎಂದರು.
ಇನ್ನೂ ಸ್ಥಳೀಯವಾಗಿ ಬಸ್ ಓಡಾಟಕ್ಕೆ ದರ ಹೆಚ್ಚಿದೆ, ಬಡವರಿಗೆ ಹೊರೆ ಆಗಬಾರದು, ಜನರ ಅಪೇಕ್ಷಯಂತೆ ಹೆಚ್ಚು ರೈಲು ಮತ್ತು ಸ್ವಚ್ಚತೆಗೆ ಹೆಚ್ಚು ಗಮನಕೊಡಲಾಗಿದೆ ಎಂದರು.
ರೈಲ್ವೆ ಟಿಕೆಟ್ ದರ ಹೆಚ್ಚೇನು ಏರಿಕೆ ಆಗಿಲ್ಲ. ಇದೀಗ ಇದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಜನರ ಅಪೇಕ್ಷೆ ಮೇರೆಗೆ ಒಂದು ಪೈಸೆ ಹೆಚ್ಚು ಮಾಡಿದ್ದೇವೆ.
ಎಲ್ಲ ಪ್ರಯಾಣಿಕರಿಗೆ ಸಬ್ಸಿಡಿ ಕೊಡಲಾಗುತ್ತಿದೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋದರೆ 25 ಪೈಸೆ ಮಾತ್ರ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.