Publish Date: Thu, 24 Sep 2015 (11:32 IST)
Updated Date: Thu, 24 Sep 2015 (11:39 IST)
ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯ ಪ್ರವಾಸ ಕೈಗೊಳ್ಳುವ ಬಗ್ಗೆ ಕೊನೆಗೂ ಅವರ ಕಚೇರಿಯ ಮೂಲಗಳು ಅಧಿಕೃತ ಹೇಳಿಕೆ ಹೊರಹಾಕಿದ್ದು, ರಾಹುಲ್ ಅ.6 ಮತ್ತು 7ರಂದು ರಾಜ್ಯಕ್ಕೆ ಭೇಟಿ ನೀಡುವುದಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಲಾಗಿದೆ.
ಇಂದು ಮಾಡಲಾಗಿರುವ ಟ್ವೀಟ್‌ನಲ್ಲಿ, ರಾಜ್ಯದಲ್ಲಿ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಜಿಲ್ಲೆ ಮಂಡ್ಯಗೆ ಮೊದಲು ಭೇಟಿ ನೀಡಿ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದು, ಈ ವೇಳೆ ರೈತರ ಸಮಸ್ಯೆ ಬಗ್ಗೆ ಚರ್ಚಿಸಲಿದ್ದಾರೆ. ಬಳಿಕ ಹಾವೇರಿ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಿ ಬೆಂಗಳೂರಿನ ಕರ್ನಾಟಕ ಕಾಂಗ್ರೆಸ್ ಪ್ರಾದೇಶಿಕ ಪಕ್ಷದ ಕಚೇರಿಯಲ್ಲಿ ರಾಜ್ಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂಬುದಾಗಿ ಮಾಹಿತಿ ನೀಡಲಾಗಿದೆ.
ಇನ್ನು ಈ ಹಿಂದೆಯೂ ಕೂಡ ರಾಜ್ಯದ ನಾಯಕರು ಈ ಬಗ್ಗೆ ಸ್ಪಷ್ಟಪಡಿಸಿದ್ದರು. ಆದರೆ ರಾಹುಲ್ ಗಾಂಧಿ ಅವರಿಂದ ಅಧಿಕೃತ ಹೇಳಿಕೆ ಹೊರಬಿದ್ದಿರಲಿಲ್ಲ. ಕೊನೆಗೂ ರಾಹುಲ್ ಗಾಂಧಿ ಅವರೇ ಇಂದು ಅಧಿಕೃತ ಹೇಳಿಕೆ ನೀಡುವ ಮೂಲಕ ರಾಜ್ಯ ಪ್ರವಾಸವನ್ನು ಖಚಿತಪಡಿಸಿದ್ದಾರೆ.