ಬೆಂಗಳೂರು: ನೀವು ಹೊಡೆದಷ್ಟು ಆರ್ ಎಸ್ಎಸ್ ಇನ್ನಷ್ಟು ಹೊಳೆಯುತ್ತದೆ ಅಷ್ಟೇ ಹೊರತು ನಿಮ್ಮಿಂದ ಸಂಘಟನೆಯನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ವಿಧೇಯಕಕ್ಕೆ ನಿನ್ನೆ ಸಚಿವ ಸಂಪುಟ ಅಂಗೀಕಾರ ನೀಡಿದೆ. ಇದರಿಂದಾಗಿ ಇನ್ನು ಮುಂದೆ ಆರ್ ಎಸ್ಎಸ್ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡಬೇಕಾದರೆ ಸರ್ಕಾರದ ಒಪ್ಪಿಗೆ ಪಡೆಯಬೇಕು ಎಂದು ಹೊಸ ನಿಯಮ ಮಾಡಿದೆ.
ಇದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿಯ ಅಂಚಿಗೆ ತಳ್ಳಿ, ಎಲ್ಲ ರಂಗಗಳಲ್ಲೂ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ತನ್ನ ಆಂತರಿಕ ಕಚ್ಚಾಟ, ವೈಫಲ್ಯ, ಹಾಗು ಭ್ರಷ್ಟಾಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಆರ್ ಎಸ್ಎಸ್ ಬಗ್ಗೆ ಇಲ್ಲಸಲ್ಲದ ಆರೋಪ, ನಿಂದನೆ ಮಾಡುತ್ತಿದೆ.
ಕಾಂಗ್ರೆಸ್ ನಾಯಕಕರು ಎಷ್ಟೇ ತಿಪ್ಪರಲಾಗ ಹಾಕಿದರೂ ಆರ್ ಎಸ್ಎಸ್ ಸಂಘಟನೆಯನ್ನು ಏನೂ ಮಾಡಲು ಸಾಧ್ಯವಿಲ್ಲ. ಸಂಘ ವಜ್ರವಿದ್ದಂತೆ. ಅದಕ್ಕೆ ಪೆಟ್ಟು ಕೊಟ್ಟಷ್ಟು ಹೊಳಪು ಹೆಚ್ಚಾಗುತ್ತದೆ ಎಂದಿದ್ದಾರೆ.