Publish Date: Fri, 03 Apr 2026 (16:49 IST)
Updated Date: Fri, 03 Apr 2026 (16:53 IST)
ದಾವಣಗೆರೆ: ಹದಿನಾರು ಬಜೆಟ್ ಮಂಡಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣ್ಕಟ್ಟು ವಿದ್ಯೆ ಕಲಿತಿದ್ದಾರೆ. ಅಭಿವೃದ್ಧಿಗೆ ಹಣ ನೀಡದೆ, ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡದೆ ಆರ್ಥಿಕ ಶಿಸ್ತು ಪಾಲಿಸುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರು ದೂರಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಶಿಸ್ತೇ ಇಲ್ಲ. ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನು ಈ ಸರ್ಕಾರ ಮಾಡಿಲ್ಲ. ಸುಳ್ಳು ಹೇಳಿಕೊಂಡೇ ಮೂರು ವರ್ಷ ಕಳೆದಿದೆ ಎಂದರು. ಸಿದ್ದರಾಮಯ್ಯ ಅವರಿಗೆ ಸುಳ್ಳು ರಾಮಯ್ಯ ಎಂಬ ಬಿರುದು ಕೊಡಬೇಕು. ಗ್ಯಾರಂಟಿಗಳ ವಿಚಾರವಾಗಿಯಂತೂ ಅವರು ಸುಳ್ಳಿನ ಪುಂಗಿ ಊದುತ್ತಿದ್ದಾರೆ. ಸಾಲದ ರಾಮಯ್ಯ ಅಲ್ಲ ಅನ್ನದರಾಮಯ್ಯ ಎಂದು ಹೇಳಿದರು. ಇಂದಿರಾ ಕಿಟ್ ಕೊಡ್ತೇವೆ ಅಂದ್ರು. ಎಲ್ಲಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡ್ತ ಇರೋದು ಕೇಂದ್ರ ಸರ್ಕಾರ. ಆದರೆ ಚೀಲ ಮಾತ್ರ ಸಿದ್ದರಾಮಯ್ಯ ಅವರದು. ಕೇಂದ್ರ ಸರ್ಕಾರದ ಅಕ್ಕಿಗೆ ಕನ್ನ ಹಾಕುವ ಇವರು ಕನ್ನರಾಮಯ್ಯ ಎಂದು ವ್ಯಂಗ್ಯವಾಡಿದರು. ಗ್ಯಾರಂಟಿಗಳನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಾವು ಗ್ಯಾರಂಟಿ ವಿರೋಧಿಗಳಲ್ಲ. ಆದರೆ ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ ಅಂತ ಹೇಳುತ್ತಿದ್ದೇವೆ. ಗ್ಯಾರಂಟಿಗಳಿಗೆ ಮೋಸ ಮಾಡ್ತಾ ಇರೋದು ಕಾಂಗ್ರೆಸ್. ಇನ್ನೂ ಇಪ್ಪತ್ತೈದು ಗ್ಯಾರಂಟಿ ಕೊಡಿ ನಾವು ಬೇಡ ಅನ್ನಲ್ಲ. ಆದರೆ ಸರಿಯಾಗಿ ಕೊಡಿ ಎಂದರು.
ಹಿಂದುಳಿದ ವರ್ಗಕ್ಕೆ ಮೋಸ ಮಾಡಿರುವ ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಮೂರು ವರ್ಷ ಆದರೂ ಹಿಂದುಳಿದ ವರ್ಗದ ಎಂಟು ನಿಗಮಗಳಿಗೆ ಅಧ್ಯಕ್ಷರನ್ನೇ ನೇಮಕ ಮಾಡಿಲ್ಲ. ಅನುದಾನ ಕೊಟ್ಟಿಲ್ಲ. ನಿಗಮಗಳ ಹಣವನ್ನೂ ನುಂಗಿ ಹಾಕಿದ್ದಾರೆ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿದ್ದಾರೆ. ಆದರೂ ಯಾವ ಮುಖ ಇಟ್ಟುಕೊಂಡು ಓಟು ಕೇಳ್ತಾ ಇದ್ದೀರಿ ಎಂದು ಕೇಳಿದರು.
ಉದ್ಯೋಗಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆಗ 56 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ ಅಂತ ಹೇಳಿದರು. ಆದರೆ ಈವರೆಗೆ ಯಾವುದೇ ನೇಮಕಾತಿ ಆಗಿಲ್ಲ. ನೇಮಕ ಮಾಡಲು ಹಣವೂ ಇಲ್ಲ. ಹೀಗೇ ಎರಡು ವರ್ಷ ಕಣ್ಣು ಒರೆಸಿ ಅಧಿಕಾರ ಮುಗಿಸುತ್ತಾರೆ ಎಂದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ದಿಗೆ ಹಣ ಇಲ್ಲ. ಆದರೆ ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಮುಖಂಡರಿಗೆ ಗಂಜಿ ಕೇಂದ್ರ ಮಾಡಿದ್ದೀರಿ. ಗ್ಯಾರಂಟಿ ಯೋಜನೆಗೆ ಐವರಿಗೆ ಸಂಪುಟ ದರ್ಜೆ ಸೌಲಭ್ಯ ಕೊಡ್ತ ಇದ್ದೀರಾ. ರಾಜ್ಯದ ತೆರಿಗೆ ಹಣವನ್ನು ಹೀಗೆ ಬಳಸಬಹುದೇ ಎಂದರು.
ರಾಜ್ಯದ ಆದಾಯ ಕುಸಿದಿದೆ. ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಆದರೆ ಬಜೆಟ್ ಗಾತ್ರ ಮಾತ್ರ ದೊಡ್ಡದು. ಎಲ್ಲಿಂದ ಹಣವನ್ನು ತರುತ್ತೀರಿ. ಸಾಲ ತೀರಿಸಲು ಮತ್ತೆ ಸಾಲ ಮಾಡುವ ಸ್ಥಿತಿಗೆ ರಾಜ್ಯ ಬಂದಿದೆ. ನಾನು ಸಾಲದ ರಾಮಯ್ಯ ಅಂದಿದ್ದಕ್ಕೆ ಅಭಿವೃದ್ಧಿಗೆ ಸಾಲ ಮಾಡಿದೆ ಅಂದ್ರು. ಆದರೆ ಅದು ಸುಳ್ಳು. ಇವರದು ಕೊರತೆ ಬಜೆಟ್. ಆದರೆ ಬಿಜೆಪಿ ಕಾಲದ್ದು ಮಿಗತೆ ಬಜೆಟ್. ಬಿಜೆಪಿ ಅಧಿಕಾರಕ್ಕೆ ಬಂದಾಗ ಹಿಂದಿನ ಸರ್ಕಾರದ ಸಾಲವನ್ನು ತೀರಿಸಿದ್ದೇವೆ. ಆದರೆ ಈಗ ಹಾಗಿಲ್ಲ. ಎಸ್‍ಸಿ/ಎಸ್‍ಟಿಗಳಿಗೆ ಮೀಸಲಿಟ್ಟ ಹಣವನ್ನು ಕಾಯ್ದೆ ಮೀರಿ ಖರ್ಚು ಮಾಡಿದರು. ಇದರ ಅಪರಾಧಿ ಸಿದ್ದರಾಮಯ್ಯ ಎಂದರು.
ಅಭಿವೃದ್ಧಿಗೆ ಹಣ ಇಲ್ಲ ಅಂತ ಕಾಂಗ್ರೆಸ್ ಮುಖಂಡರೇ ಒಪ್ಪಿಕೊಂಡಿದ್ದಾರೆ. ಆರ್.ವಿ.ದೇಶಪಾಂಡೆ, ಬಿ.ಆರ್.ಪಾಟೀಲ್, ರಾಜು ಕಾಗೆ ಹಾಗೂ ಬಸವರಾಜ ರಾಯರೆಡ್ಡಿ ಅವರೇ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಟ್ಟು ಬಿಜೆಪಿ ತೆಗಳುವುದೇ ಸಿದ್ದರಾಮಯ್ಯ ಅವರಿಗೆ ಕೆಲಸವಾಗಿದೆ. ಸಿದ್ದರಾಮಯ್ಯ ಅವರಿಗೆ ಧಮ್ಮು, ತಾಕತ್ತು ಇದ್ದರೆ ಬಿಜೆಪಿ ತೆಗಳುವುದು ಬಿಟ್ಟು ನಿಮ್ಮ ಪಕ್ಷದವರಿಗೆ ನೋಟಿಸ್ ನೀಡಿ ಎಂದು ನುಡಿದರು.
ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಅಂತ ಕೇಂದ್ರ ಸರ್ಕಾರದ ಮೇಲೆಯೇ ಸಿದ್ದರಾಮಯ್ಯ ಅವರು ಗೂಬೆ ಕೂರಿಸುತ್ತಾರೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗಲೂ ಹೆಚ್ಚು ಹಣ ನೀಡಿಲ್ಲ. ಆದರೆ ಬಿಜೆಪಿ ಅವಧಿಯಲ್ಲಿ ಸಾಕಷ್ಟು ಅನುದಾನ ದೊರೆತಿದೆ ಎಂದರು.
ಕ್ಷೇತ್ರದಲ್ಲಿ ಕಾಂಗ್ರೆಸ್‍ನವರೇ ಅಧಿಕಾರದಲ್ಲಿ ಇದ್ದರೂ ಯಾಕೆ ವೈದ್ಯಕೀಯ ಕಾಲೇಜು ತರಲಿಲ್ಲ. ಒಂದೇ ಕುಟುಂಬ ಪ್ರತಿನಿಧಿಸುತ್ತಿತ್ತು. ಅವರು ಅನ್ಯಾಯ ಮಾಡಿದರು. ಆದರೂ ಈಗ ಬಂದು ಮತ ಕೇಳಲು ಬಂದಿದ್ದಾರೆ. ದಾವಣಗೆರೆಗೆ ಜಿಲ್ಲಾಧಿಕಾರಿ ಕಚೇರಿ, ಆರ್‍ಟಿಒ ಕಚೇರಿ ಬಂದಿದ್ದೇ ಸಿದ್ದೇಶ್ವರ ಅವರು ಕಾಲದಲ್ಲಿ. ಸ್ಮಾರ್ಟ್ ಸಿಟಿಗೆ ಹಣ ಬಂದಿದ್ದು ಬಿಜೆಪಿ ಅವಧಿಯಲ್ಲಿ. 108 ಉದ್ಯಾನ ಅಭಿವೃದ್ಧಿಯಾಗಿದೆ. ಕಾಂಗ್ರೆಸ್ ಬಂದ ಮೇಲೆ ದೇವಸ್ಥಾನಕ್ಕೆ ದೀಪ ಹಚ್ಚಿ ಅಂತ ಪತ್ರ ಕೊಟ್ಡಿದ್ದಾರೆ ಅಷ್ಟೇ ಎಂದರು.
ದಾವಣಗೆರೆ ವೈದ್ಯಕೀಯ ಕಾಲೇಜು ತಪ್ಪಲು ಕಾಂಗ್ರೆಸ್ ಕಾರಣ. ಅದಕ್ಕೆ ಪ್ರಸ್ತಾವವೇ ನೀಡಿಲ್ಲ. ಮತ್ತೆ ಕಾಂಗ್ರೆಸ್ ಗೆದ್ದರೆ ಏನಾಗಲಿದೆ ಎಂಬುದನ್ನು ಇಲ್ಲಿನ ಮತದಾರ ತಿಳಿಯಬೇಕು. ಆದ್ದರಿಂದ ಈ ಬಾರಿ ಬಿಜೆಪಿ ಗೆಲ್ಲಿಸಿ. ಬದಲಾವಣೆ ತನ್ನಿ ಎಂದು ಮನವಿ ಮಾಡಿದರು.