ಕರ್ನಾಟಕದಲ್ಲಿ "ಪುಣ್ಯಕೋಟಿ ದತ್ತು ಯೋಜನೆ" ಮೂಲಕ ನಮ್ಮ ಗೋ-ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಸರ್ಕಾರದ ಈ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಗೋವುಗಳನ್ನು ನೋಡಿಕೊಳ್ಳಲು ಮತ್ತು ಗೋಶಾಲೆಗಳನ್ನು ನಿರ್ವಹಿಸುವುದಕ್ಕೆ ಸರ್ಕಾರದೊಂದಿಗೆ ಜನರೂ ಸಹ ಕೈಜೋಡಿಸಲು ಅವಕಾಶ ತೆರೆದುಕೊಳ್ಳುತ್ತದೆ. ಈ ಕಾರ್ಯಕ್ರಮ ಅಡಿಯಲ್ಲಿ ಗೋಶಾಲೆಗಳಲ್ಲಿನ ಹಸುಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ದತ್ತು ಪಡೆದುಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ಗೋಶಾಲೆಗಳಲ್ಲಿರುವ ಹಸುಗಳಿಗೆ ಉತ್ತಮ ಸೌಕರ್ಯ ಮತ್ತು ಸೌಲಭ್ಯ ಒದಗಿಸುವಂತೆ ಸಾರ್ವಜನಿಕರನ್ನು ಉತ್ತೇಜಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಸರ್ಕಾರವೇ ನಿರ್ಮಿಸಿದ ಸುಮಾರು 200 ಗೋಶಾಲೆಗಳಿದ್ದು, ಗೋವುಗಳ ಆರೈಕೆಯೇ ಅವುಗಳ ಮುಖ್ಯ ಧ್ಯೇಯವಾಗಿದೆ.