ಮೊದಲು ಅತ್ಯಾಚಾರಿಗಳು ಮತ್ತು ಕೊಲೆಗಡುಗರ ತಂದೆ, ತಾಯಿಯನ್ನು ಒಂದೆರಡು ವರ್ಷ ಶಿಕ್ಷೆಗೆ ಗುರಿಪಡಿಸಬೇಕೆಂದು ಮಧ್ಯಪ್ರದೇಶದ ಬಿಜೆಪಿ MLA ಆಕಾಶ್ ವಿಜಯವರ್ಗಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೀಗ ಒಬ್ಬ ಅತ್ಯಾಚಾರಿ ಆರೋಪಿ ಇದ್ದರೆ ನನ್ನ ಅಭಿಪ್ರಾಯದ ಪ್ರಕಾರ ಆರೋಪಿಗೆ ಮಾತ್ರ ಶಿಕ್ಷೆಯಲ್ಲ. ಆತನ ತಂದೆ, ತಾಯಿಗೂ ಒಂದೆರಡು ವರ್ಷ ಶಿಕ್ಷೆ ನೀಡಬೇಕು. ಯಾಕೆಂದರೆ ತಮ್ಮ ಮಕ್ಕಳನ್ನು ತಂದೆ, ತಾಯಿ ಸರಿಯಾಗಿ ಬೆಳೆಸದ ತಪ್ಪಿಗೆ ಈ ಶಿಕ್ಷೆ ಅನುಭವಿಸಬೇಕೆಂದಿದ್ದಾರೆ. ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಮಕ್ಕಳು ಉತ್ತಮ ಕೆಲಸ ಮಾಡಿದಾಗ ಪೋಷಕರನ್ನು ಹೊಗಳುತ್ತಾರೆ. ಅದೇ ರೀತಿ ಮಕ್ಕಳು ಕೆಟ್ಟ ಕೆಲಸ ಮಾಡಿದಾಗ ಅದೇ ಪೋಷಕರು ಆ ಕೆಟ್ಟ ಕೆಲಸಕ್ಕೆ ಕಾರಣಕರ್ತರಾಗಿರುತ್ತಾರೆ ಎಂದಿದ್ದಾರೆ. ಪೋಷಕರು ಮಕ್ಕಳನ್ನು ಬೆಳೆಸುವ ರೀತಿಯನ್ನು ಗಮನಿಸಬೇಕು. ಮಕ್ಕಳಿಗೆ ಉತ್ತಮ ವ್ಯಕ್ತಿತ್ವ ಮತ್ತು ಸಂಸ್ಕೃತಿಯನ್ನು ಕಲಿಸುವುದು ಪೋಷಕರ ಪಾತ್ರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಆಕಾಶ್ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕಾಶ್ ಪರ ಮತ್ತು ವಿರೋಧ ಕಾಮೆಂಟ್‍ಗಳ ಮೂಲಕ ಚರ್ಚೆಯಾಗುತ್ತಿದೆ.