Publish Date: Mon, 06 Aug 2018 (15:41 IST)
Updated Date: Mon, 06 Aug 2018 (15:44 IST)
ನಿವೃತ್ತ ಪಿಎಸ್.ಐ ಓರ್ವ ನಿಗೂಢವಾಗಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಐದು ಮದುವೆಯಾಗಿ ಪತ್ನಿಯರಿಗೆಲ್ಲಾ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರಿನಲ್ಲಿ ನಿವೃತ್ತ ಪಿಎಸ್.ಐ ಓರ್ವ ನಿಗೂಢವಾಗಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಐದು ಮದುವೆಯಾಗಿ ಪತ್ನಿಯರಿಗೆಲ್ಲಾ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆ ನಿವೃತ್ತ ಪಿಎಸ್.ಐ ಸಾವನಪ್ಪಿದ್ದಾಗ ಆಸ್ತಿಗಾಗಿ ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೇ ಗೊತ್ತಾಗಿದ್ದು ಪಂಚ ಪತ್ನಿಯರು ಇರೋ ವಿಚಾರ. ಇನ್ನೂ ವಿಶೇಷ ಅಂದ್ರೆ 58ನೇ ವಯಸ್ಸಿನಲ್ಲೂ 22 ವರ್ಷದ ಯುವತಿ ಚೇತನಾಳಿಗೆ ವರಿಸಿ ವಂಚಿಸಿದ್ದಾನಂತೆ ಈ ಚಪಲ ಚನ್ನಿಗರಾಯ. ತುಮಕೂರು ತಾಲೂಕಿನ ಸ್ವಾಂದೇನಹಳ್ಳಿ ನಿವಾಸಿಯಾದ ಪಿಎಸೈ ದಿವಂಗತ ವಿಶ್ವನಾಥ್, ಬರೋಬ್ಬರಿ ಐದು ಮದುವೆಯಾಗಿದ್ದಾರಂತೆ. ಮೊದಲನೆಯವರು ಸರೋಜಮ್ಮ, ಎರಡನೇಯವರು ಶಾರದಾ ಹಾಗೂ ಮೂರನೆಯವರು ಚೇತನಾ. ಇನ್ನುಳಿದ ಇಬ್ಬರು ಪತ್ನಿಯರು ಈ ಜಂಟಾಟವೇ ಬೇಡ ಎಂದು ದೂರ ಉಳಿದಿದ್ದಾರಂತೆ. ಅಂದಹಾಗೆ ಇದೇ ಜುಲೈ 18 ರಂದು ವಿಶ್ವನಾಥ್ ಸ್ವಾಂದೇನಹಳ್ಳಿಯ ತನ್ನ ಮನೆಯಲ್ಲಿ ಸಾವನಪ್ಪಿದ್ದಾರೆ.
ಈ ವೇಳೆ ಮೂರನೆ ಪತ್ನಿ ಎಂದುಕೊಳ್ಳುವ ಚೇತನಾ ಮಾತ್ರ ಇದ್ರು. ಸಾವಿನ ಸುದ್ದಿ ತಿಳಿಯುತಿದ್ದಂತೆ ಮೊದಲ ಪತ್ನಿಯ ಮಕ್ಕಳು, ಎರಡನೇ ಪತ್ನಿ ಮತ್ತು ಮಕ್ಕಳು ಸ್ವಾಂದೇನಹಳ್ಳಿಗೆ ಧಾವಿಸಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಆಗಲೇ ಗೊತ್ತಾಗಿದ್ದು ಪೊಲೀಸಪ್ಪನ ಐದು ಮದುವೆ ಸಂಗತಿ. ಈಗ ಐವರಲ್ಲಿ ಮೂವರು ಪತ್ನಿಯರ ನಡುವೆ ಮಾತ್ರ ಆಸ್ತಿಗಾಗಿ ಗಲಾಟೆ ಜೋರಾಗಿದೆ. ಮೂವರು ಕೂಡಾ ಆಸ್ತಿಗಾಗಿ ತುಮಕೂರು ಗ್ರಾಮಾಂತರ ಠಾಣಾ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಹೋದಲೆಲ್ಲಾ ಠಾಣೆಗೊಂದರಂತೆ ಚಟಕ್ಕೆ ಮದುವೆಯಾದ ವಿಶ್ವನಾಥ್ ತನ್ನ ಪತ್ನಿಯರಿಗೆ ಸಂಕಷ್ಟದಲ್ಲಿ ಸಿಲುಕಿಸಿ ಇಹಲೋಕ ತ್ಯಜಿಸಿದ್ದಾರೆ.