Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಪೊಲೀಸರಿಗೆ ಬಾಡಿ ಕ್ಯಾಮೆರಾ ಅವಳಡಿಕೆ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ

ಸದ್ಯದಲ್ಲೇ ಪೊಲೀಸರಿಗೆ ಬಾಡಿ ಕ್ಯಾಮೆರಾ ಅವಳಡಿಕೆ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ
bangalore , ಗುರುವಾರ, 23 ಡಿಸೆಂಬರ್ 2021 (20:20 IST)
ಬೆಂಗಳೂರು: -ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಪೊಲೀಸರಿಗೆ ಬಾಡಿ ಕ್ಯಾಮೆರಾ ಅವಳಡಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಭ್ರಷ್ಟಾಚಾರ ನಿಯಂತ್ರಿಸಲು ಹಾಗೂ ಕಾನೂನು ಸುವ್ಯವಸ್ಥೆ ಸುಧಾರಿಸಲು ಪೊಲೀಸರು ಬಾಡಿ ಕ್ಯಾಮೆರಾ ಧರಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ನಗರದ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ಧ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪೊಲೀಸರು ಬಾಡಿ ಕ್ಯಾಮೆರಾ ಧರಿಸುವ ವಿಚಾರವಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಯಾಮೆರಾ ಖರೀದಿ ಹಾಗೂ ಅವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಕಾರ್ಯಾದೇಶ ಹೊರಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ಸಲ್ಲಿಸಲು ಒಂದಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಕೋರಿಕೆ ಪರಿಗಣಿಸಿದ ಪೀಠ, ಈ ಕುರಿತು ಕೈಗೊಂಡಿರುವ ಕ್ರಮಗಳ ವಿವರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಹಿನ್ನೆಲೆ:-ಕೋವಿಡ್ ಅವಧಿಯಲ್ಲಿ ಒಂದಷ್ಟು ಪೊಲೀಸರು ರಸ್ತೆಗಳಿದವರ ಬಳಿ ಯಾವುದೇ ವಿವರಣೆ ಕೇಳದೆ ಥಳಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಕ್ರಮ ಕೋರಿ ಹೈಕೋರ್ಟ್ ಗೆ ಪಿಐಎಲ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಪೊಲೀಸರು ಹಲ್ಲೆ ಮಾಡಿಲ್ಲವೆಂದು ಸಮರ್ಥಿಸಿಕೊಂಡಿದ್ದರು. ಆ ಬಳಿಕ ವಕೀಲೆ ಗೀತಾ ಮಿಶ್ರಾ 2020 ರ ಡಿಸೆಂಬರ್ ನಲ್ಲಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿ, ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸ್ ಸಿಬ್ಬಂದಿ ಮಾಡುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯನ್ನು ಪೊಲೀಸ್ ಠಾಣೆಯಿಂದಲೇ ಹಿರಿಯ ಅಧಿಕಾರಿಗಳು ಗಮನಿಸಿ ಮೇಲ್ವಿಚಾರಣೆ ನಡೆಸಬಹುದು.
ಹಾಗೆಯೇ, ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಪ್ರಶ್ನೆ ಮಾಡಿದ ಪೊಲೀಸರ ಮೇಲೆ ತಪ್ಪಿತಸ್ಥರೇ ತಿರುಗಿಬಿದ್ದಿರುವ ಘಟನೆಗಳು ಜರುಗಿವೆ. ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸರಿಗೂ ರಕ್ಷಣೆ ಸಿಗಲಿದೆ. ತಪ್ಪಿತಸ್ಥರಿಗೂ ಭಯ ಹುಟ್ಟುತ್ತದೆ. ಆದ್ದರಿಂದ, ಬೆಂಗಳೂರು ನಗರ ಪೊಲೀಸರಿಗಾಗಿ ಈಗಾಗಲೇ ಖರೀದಿಸಿರುವ 50 ಬಾಡಿ ಕ್ಯಾಮರಾಗಳನ್ನು ಕೂಡಲೇ ಬಳಸುವಂತೆ ನಿರ್ದೇಶಿಸಬೇಕು. ರಾಜ್ಯಾದ್ಯಂತ ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿ ಕ್ಯಾಮರಾ ಖರೀದಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಓಮಿಕ್ರಾನ್ ಭೀತಿ: ಜ.5ರವರೆಗೆ ಕೊರೋನಾ ಮಾರ್ಗಸೂಚಿ ಕ್ರಮ ವಿಸ್ತರಣೆ