Publish Date: Sun, 04 Jun 2017 (16:18 IST)
Updated Date: Sun, 04 Jun 2017 (16:30 IST)
ಬೆಂಗಳೂರು:ಮುಸ್ಸಂಜೆ ಮಹೇಶ್ ನಿರ್ದೇಶನದ ಜಿಂದಾ ಸಿನಿಮಾದ ಟ್ರೇಲರ್‌ನಲ್ಲಿ ನಟಿ ಮೇಘನಾ ರಾಜ್ ಹುಡುಗರನ್ನು ಕುರಿತು ಹೇಳಿರುವ ಸಂಭಾಷಣೆ ಖಂಡಿಸಿ ಜನ್ಮಭೂಮಿ ಸಂಘಟನೆ ನೇತೃತ್ವದಲ್ಲಿ ಯುವಕರು ಮೇಘನಾ ರಾಜ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಜೆಪಿ ನಗರದಲ್ಲಿರುವ ಮೇಘನಾ ರಾಜ್ ಮನೆಮುಂದೆ ಪ್ರತಿಭಟಿಸುತ್ತಿರುವ ಯುವಕರು ಮೇಘನಾರಾಜ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಿದ್ದು, ವಿವಾದಿತ ಸಂಭಾಷಣೆಗೆ ಸಂಬಂಧಿಸಿದಂತೆ ಮೇಘನಾ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿರುವ ನಟಿ ಮೇಘನಾರಾಜ್, ಸಿನಿಮಾ ನೋಡಿದ ನಂತರ ಮಾತಾಡಿ, ನಾನು ಎಲ್ಲಾ ಹುಡುಗರು, ಗಂಡಸರನ್ನು ಕುರಿತು ಆ ರೀತಿ ಸಂಭಾಷಣೆ ಹೇಳಿಲ್ಲ, ಮೊದಲು ಸಿನಿಮಾ ನೋಡಿ. ಜಿಂದಾ ಒಂದು ನೈಜ ಘಟನೆ ಆಧಾರಿತ ಸಿನಿಮಾ, ಪಾತ್ರಧಾರಿಯಾಗಿ ನಾನು ಆ ಡೈಲಾಗ್ ಹೇಳಿದ್ದೇನೆಯೇ ಹೊರತು ಮೇಘನಾರಾಜ್ ಆಗಿ ಅಲ್ಲ, ನಾನು ನಿಜ ಜೀವನದಲ್ಲೂ ಆ ರೀತಿ ಇಲ್ಲ ಎಂದು ಹೇಳಿದ್ದಾರೆ.