ಬೆಂಗಳೂರು: ಪ್ರತಿನಿತ್ಯ ಸುದ್ದಿಯಲ್ಲಿರಲು ನನ್ನ ಬೈಟ್ಸ್ ತಗೊಳ್ಳಿ ಎಂದು ಸ್ವತಃ ಪ್ರತಾಪ್ ಸಿಂಹ ಅವರೇ ಮಾಧ್ಯಮಗಳ ಮುಂದೆ ಅಂಗಲಾಚುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಪಿಯುಸಿ ಫೇಲಾದ ಮಗನಿಗೆ ಮಲ್ಲಿಕಾರ್ಜುನ ಖರ್ಗೆ ಐಟಿ ಬಿಟಿ ಖಾತೆ ಕೊಟ್ಟು ಬೆಂಗಳೂರಿಗೆ ಕೆಟ್ಟ ಹೆಸರು ತಂದ್ರು ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದ್ದರು. ಇದಕ್ಕೀಗ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ ಸುದ್ದಿಯಲ್ಲಿರಲು ಸಲುವಾಗಿ ಮೈಸೂರಿನ ಪತ್ರಕರ್ತರ ಕೈಕಾಲು ಹಿಡಿದು ಪ್ರತಿದಿನವೂ ನನ್ನ ಪ್ರತಿಕ್ರಿಯೆ ತಗೋಳಿ ಅಂತ ಅಂಗಲಾಚುತ್ತಿದ್ದಾರೆ ಎಂಬುದು ಮಾಧ್ಯಮ ಮಿತ್ರರ ಆಫ್ ದಿ ರೆಕಾರ್ಡ್ ವರದಿ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ.
ಎಲ್ಲಾ ವಿಷಯಕ್ಕೂ ಬಾಯಿ ಹಾಕುವ ಪ್ರತಾಪ್ ಸಿಂಹರವರು ಬಿಜೆಪಿ ಪಕ್ಷದ ಯಾವ “ಪೊಸಿಷನ್”ನಲ್ಲಿದ್ದಾರೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು!
ನನ್ನ ಅರ್ಹತೆಯನ್ನು ಪ್ರಶ್ನಿಸುವ ಪ್ರತಾಪ್ ಸಿಂಹರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಅವರಿಗೆ ಅರ್ಹತೆ ಇಲ್ಲದ್ದಕ್ಕೆ ಅಲ್ಲವೇ? ನನ್ನ ಅರ್ಹತೆಯ ಬಗ್ಗೆ, ಇಲಾಖೆಗಳಲ್ಲಿ ನನ್ನ ಕಾರ್ಯವೈಖರಿಯ ಬಗ್ಗೆ ನಾನು ಹೇಳಿಕೊಳ್ಳುವುದಕ್ಕಿಂತ ಬಿಜೆಪಿಯ ಕೇಂದ್ರ ಸರ್ಕಾರದ ದಾಖಲೆಗಳು, ಅಂಕಿ ಅಂಶಗಳು ಹೇಳುತ್ತವೆ ಎಂದಿದ್ದಾರೆ.