Publish Date: Sun, 10 Mar 2024 (13:10 IST)
Updated Date: Sun, 10 Mar 2024 (13:13 IST)
ಹುಬ್ಬಳ್ಳಿ: ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಮೈಸೂರಿನಿಂದ ಟಿಕೆಟ್ ಕೈ ತಪ್ಪುವ ಸಾಧ‍್ಯತೆಗಳಿವೆ ಎಂಬ ವರದಿಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಿಂದ ಈ ಬಾರಿ ಹಾಲಿ ಸಂಸದ ಪ್ರತಾಪ್ ಸಿಂಹ ಬದಲಾಗಿ ರಾಜವಂಶಸ್ಥ ಯದುವೀರ್ ಒಡೆಯರ್ ಗೆ ಟಿಕೆಟ್ ನೀಡಲಾಗುವುದು ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ರಾಜ್ಯ ಬಿಜೆಪಿ ನಾಯಕರೇ ಪ್ರತಾಪ್ ಸಿಂಹಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಹ್ಲಾದ್ ಜೋಶಿ ಇದೆಲ್ಲಾ ಊಹಾಪೋಹ ಎಂದಿದ್ದಾರೆ. ಎರಡು ಬಾರಿ ಗೆದ್ದವರಿಗೂ ಟಿಕೆಟ್ ನೀಡಲಾಗಿದೆ. ಎಂಟು ಬಾರಿ ಗೆದ್ದವರಿಗೂ ಟಿಕೆಟ್ ನೀಡಲಾಗಿದೆ. ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುತ್ತದೆ ಎನ್ನುವುದು ಊಹಾಪೋಹ ಎಂದಿದ್ದಾರೆ.
ಎರಡು ಮೂರು ದಿನದಲ್ಲಿ ಟಿಕೆಟ್ ಹಂಚಿಕೆ ಫೈನಲ್ ಆಗಬಹುದು ಎಂದೂ ಅವರು ಹೇಳಿದ್ದಾರೆ. ಕಾಂಗ್ರೆಸ್ ಈಗಾಗಲೇ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಟಿಕೆಟ್ ಕೈ ತಪ್ಪಿದವರಿಗೆ ಸಮಾಧಾನ ಮಾಡುವ ಕೆಲಸ ಹೈಕಮಾಂಡ್ ಮಾಡಲಿದೆ ಎಂದೂ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.