ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ರೇಪ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಈಗ ಮತ್ತೊಮ್ಮೆ ಬೆಂಗಳೂರಿಗೆ ಬರುವ ವಿಮಾನ ಟಿಕೆಟ್ ರದ್ದುಗೊಳಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.
ಈ ಮೊದಲು ಪ್ರಜ್ವಲ್ ಮೇ 3 ರಂದು ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ನಿಗದಿಪಡಿಸಿದ್ದರು. ಆದರೆ ಇಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ಬಿಗಿಯಾಗುತ್ತಿದ್ದಂತೇ ಟಿಕೆಟ್ ರದ್ದುಗೊಳಿಸಿ ವಿದೇಶದಲ್ಲೇ ಉಳಿದುಕೊಂಡಿದ್ದರು. ಅದಾದ ಬಳಿಕ ಮೇ 15 ಕ್ಕೆ ವಾಪಸ್ ಬರಲು ಟಿಕೆಟ್ ನಿಗದಿಗೊಳಿಸಿದ್ದರು.
ಆದರೆ ಈಗ ಮೇ 15 ಕ್ಕೆ ನಿಗದಿಯಾಗಿದ್ದ ಟಿಕೆಟ್ ನ್ನೂ ರದ್ದುಗೊಳಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಅವರು ತಾನಾಗಿಯೇ ಬಂದು ಎಸ್ಐಟಿ ವಿಚಾರಣೆಗೆ ಹಾಜರಾಗುವ ನಿರೀಕ್ಷೆ ಸುಳ್ಳಾಗಿದೆ. ಇದೀಗ ಸ್ವತಃ ಎಸ್ಐಟಿ ತಂಡವೇ ವಿದೇಶಕ್ಕೆ ತೆರಳಿ ಪ್ರಜ್ವಲ್ ರನ್ನು ಹುಡುಕಾಡಿ ಬಂಧಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ.
ಇದುವರೆಗೆ ಪ್ರಜ್ವಲ್ ಯಾವ ದೇಶದಲ್ಲಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಅವರ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ನಿಡಲಾಗಿದೆ. ಆದರೆ ಹಡಗು ಅಥವಾ ವಿಮಾನದಲ್ಲಿ ಅವರು ಪ್ರಯಾಣಿಸದೇ ಇರುವುದರಿಂದ ಸುಳಿವು ಪತ್ತೆಯಾಗಿಲ್ಲ. ಇದು ತನಿಖಾ ತಂಡಕ್ಕೆ ದೊಡ್ಡ ತಲೆನೋವಾಗಿದೆ.