ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ ಪ್ರಕರಣಕ್ಕೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಇದೀಗ ಸ್ಪೋಟ ನಡೆದ ಸ್ಥಳದಲ್ಲಿ ಟೈಮರ್, ಬ್ಯಾಟರಿ ಪತ್ತೆಯಾಗಿದ್ದು ಟೈಂ ಬಾಂಬ್ ಬಳಕೆ ಶಂಕೆ ವ್ಯಕ್ತವಾಗಿದೆ.
ಇಂದು ಮಧ‍್ಯಾಹ್ನ ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟವಾಗಿತ್ತು. ಘಟನೆಯಲ್ಲಿ ಸುಮಾರು 9 ಮಂದಿಗೆ ಗಾಯಗೊಂಡಿದ್ದರು. ಸ್ಪೋಟದ ಭೀಕರತೆಗೆ ಅಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದರು. ಇದೀಗ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
ಇದು ಬ್ಯಾಗ್ ಒಳಗೆ ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸ್ಪೋಟಕ್ಕೆ ನಿಖರ ಕಾರಣವೇನು ಎಂದು ವಿಧಿ ವಿಜ್ಞಾನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಬಂದು ಪರಿಶೀಲನೆಯನ್ನೂ ನಡೆಸಿತ್ತು.
ಒಟ್ಟು 9 ಮಂದಿ ಗಾಯಗೊಂಡಿದ್ದು, ಈ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸ್ಪೋಟದ ಶಬ್ಧದಿಂದ ಮೂವರಿಗೆ ಕಿವಿ ಪರದೆಗೆ ಹಾನಿಯಾಗಿದೆ. ಅವರಿಗೆ ಸರ್ಜರಿ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಐಜಿಪಿ ಅಲೋಕ್ ಕುಮಾರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಳಿಕ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಗೆ ನಿಖರ ಕಾರಣವೇನೆಂದು ಎಫ್ ಎಸ್ಎಲ್ ವರದಿ ಬಳಿಕವೇ ಗೊತ್ತಾಗಲಿದೆ.