Webdunia - Bharat's app for daily news and videos

Install App

ಅ.25ರಿಂದ 1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳು ಪುನಾರಂಭ

Webdunia
ಸೋಮವಾರ, 18 ಅಕ್ಟೋಬರ್ 2021 (20:21 IST)
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಕೋವಿಡ್-19 ತಜ್ಞರ ಸಮಿತಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆ ಮೇರೆಗೆ ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳನ್ನು ಪುನಾರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. 
 
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಕಳೆದ 20 ತಿಂಗಳಿಗೂ ಹೆಚ್ಚು ಕಾಲದಿಂದ ಮಕ್ಕಳು ಭೌತಿಕ ತರಗತಿಗಳಿಂದ ದೂರ ಉಳಿದಿದ್ದಾರೆ. ಅವರಿಗೆ ರೂಢಿಯಾಗಲೆಂದು ಮೊದಲ ಒಂದು ವಾರ ಮಧ್ಯಾಹ್ನದವರೆಗೆ ಮಾತ್ರ ತರಗತಿಗಳನ್ನು ನಡೆಸಲಾಗುತ್ತದೆ. ನಂತರ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಮಕ್ಕಳು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಡಿಡಿಪಿಐಗಳು ಮತ್ತು ಬಿಇಒಗಳು, ಶಿಕ್ಷಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮಕ್ಕಳಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲು ಕೋವಿಡ್ ಸೋಂಕಿನ ಕುರಿತು ತರಗತಿ ಅವಧಿಯಲ್ಲಿ ಮಾಹಿತಿಯನ್ನು ನೀಡಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು. 
 
‘ದೈಹಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ತರಗತಿಗಳಲ್ಲಿ ಶೇ.50ರಷ್ಟು ಹಾಜರಾತಿಗೆ ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ. ಕೊಠಡಿಯಲ್ಲಿ ಅಂತರ ಕಾಪಾಡಿಕೊಳ್ಳಲು ಸಾಕಷ್ಟು ಜಾಗ, ಮೂಲಸೌಕರ್ಯ ಲಭ್ಯವಿದ್ದಲ್ಲಿ ಅಂತಹ ಕಡೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮಕ್ಕಳು ಹಾಜರಾಗಲು ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಸಚಿವರು ನುಡಿದರು. 
 
‘ಅನೇಕ ತಾಲೂಕುಗಳಲ್ಲಿ ಅನೇಕ ದಿನಗಳಿಂದ ಪಾಸಿಟಿವಿಟಿ ಪ್ರಮಾಣ ಶೂನ್ಯವಿದೆ. ಹೀಗಾಗಿ, ಭೌತಿಕ ತರಗತಿಗಳ ಆರಂಭಕ್ಕೆ ಯಾವುದೇ ಆತಂಕವಿಲ್ಲ’ ಎಂದು ಸಚಿವರು ಹೇಳಿದರು. 
 
‘ಕೋವಿಡ್-19 ಹಿನ್ನೆಲೆಯಲ್ಲಿ ದೈಹಿಕ ತರಗತಿಗಳಿಂದ ದೂರ ಉಳಿದ ಪರಿಣಾಮ ಮಕ್ಕಳಲ್ಲಿ ಉಂಟಾಗಿರುವ ಶೈಕ್ಷಣಿಕ ಹಿನ್ನೆಡೆಯನ್ನು ಸರಿದೂಗಿಸಿ ಶಾಲೆಗಳನ್ನು ಆರಂಭಿಸಬೇಕು ಎಂಬ ಉದ್ದೇಶ ಬಹಳ ದಿನಗಳಿಂದ ಇತ್ತು. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಪಡೆದು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ಆರಂಭಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದ್ದಾರೆ. ಅದರಂತೆ ತರಗತಿಗಳನ್ನು ಆರಂಭಿಸಲಾಗುತ್ತಿದೆ' ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು. 
 
‘ಪಠ್ಯಕ್ರಮವನ್ನು ಕಡಿತಗೊಳಿಸುವ ಪ್ರಸ್ತಾಪ ಇಲ್ಲ. ನಿಗದಿತ ಅವಧಿಯಲ್ಲಿ ಪಠ್ಯವನ್ನು ಯಾವ ರೀತಿ ಪೂರ್ಣಗೊಳಿಸಬೇಕು ಎಂಬ ಕುರಿತು ಶಿಕ್ಷಕರು, ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಸಚಿವರು ತಿಳಿಸಿದರು. 
 
‘ನವೆಂಬರ್ 2ರಿಂದ ಶನಿವಾರದಂದು ಕೂಡ ತರಗತಿಗಳನ್ನು ನಡೆಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು. 
 
‘ತರಗತಿಗಳಿಗೆ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಿಲ್ಲ. ಆನ್‌ಲೈನ್ ತರಗತಿಗಳನ್ನು ಮುಂದುವರೆಸಬಹುದು. ಆದರೆ, ಬಹುತೇಕ ಶಾಲೆಗಳಲ್ಲಿ ಭೌತಿಕ ಹಾಜರಾತಿಗೆ ಮಕ್ಕಳು ಮತ್ತು ಪಾಲಕರು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಸಚಿವರು ಹೇಳಿದರು. 
 
‘ಅ.21ರಿಂದ 6ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಆರಂಭಿಸಲಾಗುತ್ತದೆ. ನ.2ರಿಂದ ಎಲ್ಲ ತರಗತಿಗಳ ಮಕ್ಕಳಿಗೆ ಬಿಸಿಯೂಟ ಆರಂಭಿಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು.
 
 
ಆನ್‌ಲೈನ್ ತರಗತಿಗಳಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನೆಡೆಯಾಗಿರುವ ಕಾರಣ ಅಂತಹ ಮಕ್ಕಳಿಗೆ ‘ಸೇತು ಬಂಧ’ ವಿಶೇಷ ತರಗತಿಗಳ ಮೂಲಕ ಪಾಠವನ್ನು ಹೇಳಿಕೊಡಲಾಗುತ್ತದೆ. ಈ ಮೂಲಕ ಕಲಿಕೆ ಕೊರತೆಯನ್ನು ಸರಿದೂಗಿಸಲಾಗುತ್ತದೆ ಎಂದು ಸಚಿವರು ನುಡಿದರು. 
 
ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿಯಂತೆ ಶಾಲೆಗಳಲ್ಲಿ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಪಾಲಿಸಲು ಶಿಕ್ಷಣ ಇಲಾಖೆಯಿಂದ ಪ್ರತ್ಯೇಕವಾಗಿ ಮಾರ್ಗಸೂಚಿ ಹೊರಡಿಸಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments