ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರ ದಾಳಿಯ ನಂತರ ಕಾಶ್ಮೀರದ ವಿವಿಧೆಡೆ ಸಿಲುಕಿದ್ದ 178 ಭಾರತೀಯರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಯಿತು.
ಗುರುವಾರ ಮಧ್ಯಾಹ್ನ 12.30 ರ ಸುಮಾರಿಗೆ ಕನ್ನಡಿಗರನ್ನು ಒಳಗೊಂಡ ವಿಮಾನ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
ಉಗ್ರ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 28 ಮಂದಿಯ ಸಾವಿನ ಸುದ್ದಿ ಬರುತ್ತಿದ್ದ ಹಾಗೇ ಕರ್ನಾಟಕ ಸರ್ಕಾರ ಎರಡು ವಿಶೇಷ ತಂಡಗಳನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿತ್ತು.
ಕಾರ್ಮಿಕ ಸಂತೋಷ್ ಅನಿಲ್ ಲಾಡ್ ನೇತೃತ್ವದಲ್ಲಿ ಕನ್ನಡಿಗರನ್ನು ವಾಪಸ್ ಕರೆತರುವ ಕಾರ್ಯಾಚರಣೆ ನಡೆಸಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಸಹ ಕಾಶ್ಮೀರದಲ್ಲಿ ರಕ್ಷಣಾ ತಂಡಕ್ಕೆ ಸಾಥ್ ನೀಡಿದ್ದರು.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಸಚಿವ ಸಂತೋಷ್ ಲಾಡ್, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕನ್ನಡಿಗರು ಆಘಾತದಲ್ಲಿದ್ದರು. ದಾಳಿ ಬಳಿಕ ಯಾವಾಗ ಏನ್ ಬೇಕಾದರೂ ಆಗಬಹುದೆಂಬ ಭಯದಲ್ಲಿದ್ದರು.
ನಾನೇ 40ಕ್ಕೂ ಹೆಚ್ಚು ಸ್ಥಳಕ್ಕೆ ಭೇಟಿ ನೀಡಿ ಕನ್ನಡಿಗರ ಭೇಟಿಯಾದೆ. ಮಾಧ್ಯಮಗಳು ಪ್ರಸಾರ ಮಾಡಿದ ಸಹಾಯವಾಣಿ ಸಂಖ್ಯೆ ಹಾಗೂ ಮಾಹಿತಿ ಪಡೆದು ಅನೇಕರು ನಮ್ಮನ್ನು ಸಂಪರ್ಕಿಸಿದರು. ಎಲ್ಲರ ಸಹಕಾರದಿಂದ ಕನ್ನಡಿಗರನ್ನು ಕರೆತರುವುದು ಸಾಧ್ಯವಾಯಿತು ಎಂದರು.