ಬೆಂಗಳೂರು: ಇದು ಸಿದ್ದರಾಮಯ್ಯ ಸರ್ಕಾರ ನಿಮ್ಮಪ್ಪಂದಲ್ಲ ಎಂಬ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಪಿ.ಸಿ. ಮೋಹನ್, ಅದು ಅವರ ಸಂಸ್ಕಾರ, ಆ ಬಗ್ಗೆ ನಾವೇನು ಹೇಳೋದಕ್ಕೆ ಆಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದರು. ತಾವು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು. ಹೀಗಾಗಿ, ಇದು ಸಿದ್ದರಾಮಯ್ಯ ಸರ್ಕಾರ ನಿಮ್ಮಪ್ಪಂದಲ್ಲ ಎಂಬ ಹೇಳಿಕೆ ನೀಡಿದ್ದಾಗಿ ಪ್ರದೀಪ್ ಸ್ಪಷ್ಟನೆ ನೀಡಿದ್ದಾರೆ.
ಅದೇ ಕಾರ್ಯಕ್ರಮದಲ್ಲಿ ಪ್ರದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದ ಪಿ.ಸಿ. ಮೋಹನ್ ಪ್ರತಿಕ್ರಿಯಿಸಿದ್ದು, ಪ್ರದೀಪ್ ಈಶ್ವರ್ ಅವರನ್ನು ರೊಚ್ಚಿಗೆಬ್ಬಿಸಿಲ್ಲ. ಅದೊಂದು ಸಮುದಾಯದ ಸರ್ಕಾರಿ ಕಾರ್ಯಕ್ರಮವಾಗಿತ್ತು. ಸರ್ಕಾರದಿಂದ ನನ್ನ ಹೆಸರೂ ಹಾಕಿದ್ದರು. ನಾನೂ ಹೋಗಿ ಭಾಗವಹಿಸಿದ್ದೆ. ಸಮುದಾಯದ ಕುರಿತು ಸಭಿಕರು ನನಗೂ ಮನವಿ ಸಲ್ಲಿಸಿ, ಬೇಡಿಕೆಗಳನ್ನು ಕೇಳಿದರು ಅದರಲ್ಲಿ ತಪ್ಪೇನಿದೆ? ಜನರು ಕೇಳಿದ್ದನ್ನು, ಹೇಳಿದ್ದನ್ನೆಲ್ಲಾ ಆವೇಶದಿಂದ ತೆಗೆದುಕೊಳ್ಳಬಾರದು. ಆ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಮೋಸವಾಗಿದೆ. ಆ ಬಗ್ಗೆ ಸಮುದಾಯಕ್ಕೆ ಆಕ್ರೋಶವಿದೆ ಎಂದರು.
ಮೊದಲ ಬಾರಿ ಪ್ರದೀಪ್ ಶಾಸಕರಾಗಿದ್ದಾರೆ. ಈಗ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿ ಮಾಡಿದ್ದೇವೆ. ಅದಕ್ಕೆ ಬರಬೇಕಿರುವ 300 ಕೋಟಿ ಅನುದಾನವನ್ನು ತರಲಿ, ಅಧ್ಯಕ್ಷರನ್ನು ನೇಮಕ ಮಾಡಲಿ. ಜೊತೆಗೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ಠೇವಣಿ ಇಡಲು ಪ್ರಯತ್ನಿಸಲಿ ಎಂದು ಮೋಹನ್ ಸವಾಲು ಹಾಕಿದ್ದಾರೆ.