ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಗ್ಯಾಂಬ್ಲಿಂಗ್ ನಿಷೇಧ ಕಾಯಿದೆ
bangalore , ಶುಕ್ರವಾರ, 12 ನವೆಂಬರ್ 2021 (21:21 IST)
ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಗ್ಯಾಂಬ್ಲಿಂಗ್ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಸದ್ಯಕ್ಕೆ ಗೇಮಿಂಗ್ ಕಂಪನಿಗಳ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳುವುದಿಲ್ಲವೆಂಬ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮೌಖಿಕ ಭರವಸೆ ನೀಡಿದೆ.
ರಾಜ್ಯದಲ್ಲಿ ಆನ್ ಲೈನ್ ಗೇಮ್ ರದ್ದುಪಡಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಹಾಗೂ ಇತರೆ ಗೇಮಿಂಗ್ ಕಂಪನಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರ ಈ ಭರವಸೆ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಎಜಿ ಪ್ರಭುಲಿಂಗ ನಾವದಗಿ, ಏಕಸದಸ್ಯಪೀಠದ ಮುಂದೆ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಇಲ್ಲಿಯೂ ಪರಿಗಣಿಸಬೇಕು. ಅರ್ಜಿದಾರರ ಎಲ್ಲ ವಾದಕ್ಕೆ ಉತ್ತರ ನೀಡಲಾಗುವುದು ಎಂದರು.
ರಮ್ಮಿ ಫೆಡರೇಷನ್ ಪರ ಒಂದೂವರೆ ತಾಸಿಗೂ ಅಧಿಕ ಕಾಲ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಸ್ಕಿಲ್ ಮತ್ತು ಚಾನ್ಸ್ ಎರಡು ಬಗೆಯ ಆಟಗಳಿದ್ದು, ಸ್ಕಿಲ್ ಗೇಮ್ಗಳ ತಡೆಯುವಂತಿಲ್ಲ. ಆದರೂ, ಕರ್ನಾಟಕ ಸರ್ಕಾರ ನಿಷೇಧಿಸಿರುವ ಗೇಮ್ನಲ್ಲಿ ಸ್ಕಿಲ್ ಕೂಡ ಸೇರಿಸಿರುವುದು ಸುಪ್ರೀಂಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿದೆ ಎಂದು ವಿವರಿಸಿದರು.
ವಾದ ಆಲಿಸಿದ ಪೀಠ ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ.18ಕ್ಕೆ ಮುಂದೂಡಿತು.
ಮುಂದಿನ ಸುದ್ದಿ