ಬೆಂಗಳೂರು: ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣ ನಡೆದಿದ್ದು, ನಿಗಮದ ಅಧ್ಯಕ್ಷ ಬಸವರಾಜ ದದ್ದಲ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯಂತೆ ಈ ಅವ್ಯವಹಾರ ನಡೆದಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಎಸ್.ಟಿ. ಮೋರ್ಚಾವು ರಾಜ್ಯಾದ್ಯಂತ ಇದೇ 18ರಂದು ಪೂರ್ವಭಾವಿ ಸಭೆಗಳನ್ನು ನಡೆಸಲಿದೆ. ಇದೇ 28ರಂದು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಉಗ್ರವಾದ ಹೋರಾಟ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೂಚಿಸಿದ್ದಾರೆ ಎಂದು ಪ್ರಕಟಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಹಾಲಿ ಶಾಸಕರು, ಮಾಜಿ ಶಾಸಕರು, ಸಂಸದರು ಭಾಗವಹಿಸುತ್ತಾರೆ. ಎಸ್‍ಟಿ ಮೋರ್ಚಾದ ಜೊತೆಗೆ ವಾಲ್ಮೀಕಿ ಸಮುದಾಯದ ಇತರ ಸಂಘ ಸಂಸ್ಥೆಗಳೂ ಭಾಗವಹಿಸಲಿವೆ ಎಂದು ಅವರು ತಿಳಿಸಿದರು.
ನಿಗಮದ ಹಣವು ವೈನ್ ಶಾಪ್, ಬಂಗಾರದ ಅಂಗಡಿಗಳು, ತೆಲಂಗಾಣದ ಚುನಾವಣೆ ಖರ್ಚಿಗೆ ಬಳಕೆಯಾದಂತಿದೆ ಎಂದರಲ್ಲದೆ, ಬಳ್ಳಾರಿ, ರಾಯಚೂರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷೇತ್ರಗಳ ಲೋಕಸಭಾ ಚುನಾವಣೆಗೂ ಇದು ಬಳಕೆ ಆದಂತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಈ ಹಣವನ್ನು ವಾಪಸ್ ಪಡೆದು ನಮ್ಮ ಸಮುದಾಯಗಳ ಏಳಿಗೆಗೆ ಬಳಸಬೇಕಿದೆ ಎಂದರಲ್ಲದೆ, ಈ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದರು. 28ರ ಬಳಿಕ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೂ ಹೋರಾಟ ಮಾಡಲಿದ್ದೇವೆ ಎಂದು ವಿವರ ನೀಡಿದರು.