Select Your Language

Notifications

webdunia
webdunia
webdunia
webdunia

ಷಡ್ಯಂತ್ರಕ್ಕೆ ಬಗ್ಗಲ್ಲ, ನಮ್ಮ ಪ್ರಕರಣ ಹಗರಣವಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಷಡ್ಯಂತ್ರಕ್ಕೆ ಬಗ್ಗಲ್ಲ, ನಮ್ಮ ಪ್ರಕರಣ ಹಗರಣವಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Sampriya

ಮೈಸೂರು , ಗುರುವಾರ, 11 ಜುಲೈ 2024 (18:07 IST)
Photo Courtesy X
ಮೈಸೂರು: ಬಿಜೆಪಿಯವರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಮಾತ್ರ ರಾಜಕೀಯ ಮಾಡಲು ಬರುತ್ತದೆಯೇ?  ನಮಗೂ ರಾಜಕೀಯವಾಗಿ ಪ್ರತಿರೋಧ ನೀಡಲು ತಿಳಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೂಡಾ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಅವರು ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವ ಬಗ್ಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ ಅವರು ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿಯೇ ಪ್ರತಿಭಟನೆ ಮಾಡಲಿ. ಮೂಡಾ  ಬಗ್ಗೆ ತನಿಖೆ ಈಗಾಗಲೇ ನಡೆಯುತ್ತಿದೆ ಎಂದರು.

ಕಾನೂನುಬಾಹಿರ ಎಂದಾದರೆ ದಾಖಲೆ ನೀಡಲಿ

ಬದಲಿ ನಿವೇಶನ ನೀಡಿರುವುದು   ಕಾನೂನುಬದ್ಧವಾಗಿದೆ ಎನ್ನುವುದು ನಮ್ಮ ವಾದ.  ಅವರು ಕಾನೂನುಬಾಹಿರವಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ತೋರಿಸಲಿ ಎಂದು ಹೇಳಿದರು.

ಅಕ್ರಮವೇನಾಗಿದೆ

ಜಿಲ್ಲಾಧಿಕಾರಿಗಳು 2005 ರಲ್ಲಿ ಭೂ ಪರಿವರ್ತನೆ ಮಾಡಿದ್ದು  ನಿವೇಶನ ಮಾಡುವ ಮುನ್ನ ಜಮೀನು ಕೃಷಿ ಭೂಮಿಯೇ. ಮಲ್ಲಿಕಾರ್ಜುನ ಸ್ವಾಮಿ ನನ್ನ ಭಾವಮೈದುನ. 2010 ರಲ್ಲಿ   ದಾನಪತ್ರ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವೇನಾಗಿದೆ ಎಂದರು.

ಮೂಡಾ  ಸದಸ್ಯರೆಲ್ಲಾ ಏನು ಮಾಡುತ್ತಿದ್ದರು

ಕೃಷಿ ಭೂಮಿ ಎಂದು  ಕೊಟ್ಟಿದ್ದರೂ ಕೂಡ ತಪ್ಪೇನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, 2014 ರಲ್ಲಿ ಮೂಡಾ ಜಮೀನು ಅಲ್ಲದೆ ಹೋದರೂ ಕೂಡ  ನಿವೇಶನ ಮಾಡಿ ಹಂಚಿದ್ದಾರೆ. ಅದಕ್ಕೆ ನಾವು ಸುಮ್ಮನೆ ಬಿಡಬೇಕಾ. ಬದಲಿ ನಿವೇಶನ ಕೇಳಿದ್ದು ಇಂಥ ಜಾಗದಲ್ಲಿಯೇ ನಿವೇಶನ  ಕೊಡಿ ಎಂದು ನಾವು ಕೇಳಿಲ್ಲ. ಆಗ ಮೂಡಾ  ಸದಸ್ಯರೆಲ್ಲಾ ಏನು ಮಾಡುತ್ತಿದ್ದರು. ಬಿಜೆಪಿ ಸರ್ಕಾರವೇ ಇತ್ತು ಆಗ. ಕಾನೂನು ಪ್ರಕಾರ ನಮಗೆ ಬೇರೆ ಜಮೀನು ಕೊಡಬೇಕು. ಇದೇ ರೀತಿಯಲ್ಲಿ ಸುಂದರಮ್ಮ ಪ್ರಕರಣದಲ್ಲಿ  ಅವರು  ನ್ಯಾಯಾಲಯಕ್ಕೆ ಹೋಗಿದ್ದಾರೆ. ಉಚ್ಚ ನ್ಯಾಯಾಲಯ ಅಷ್ಟು ಜಾಗವನ್ನೂ ಕೊಡಲು ಆದೇಶಿಸಿ ಒಂದು ಲಕ್ಷ ರೂಪಾಯಿ ದಂಡವನ್ನೂ ಮೂಡಾಗೆ ಹಾಕಿದೆ. ಬಿಜೆಪಿ  ಸರ್ಕಾರದ ಅವಧಿಯಲ್ಲಿ ಮೂಡಾ   ತಪ್ಪು ಮಾಡಿದ್ದರೆ ಯಾರು ಜವಾಬ್ದಾರರು. ಸಿದ್ದರಾಮಯ್ಯ ಜವಾಬ್ದಾರರೇ? ಒಂದು ವೇಳೆ ಇದನ್ನು ರದ್ದು ಮಾಡಿದರೆ. ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕಲ್ಲವೇ.  ಅದರ ಪ್ರಕಾರ 57 ಕೋಟಿಯಾದರೆ ಬಡ್ಡಿ ಸೇರಿಸಿ 62 ಕೋಟಿಯಾಗುತ್ತದೆ. ಮೂಡಾದವರು 62 ಕೋಟಿ ಕೊಡಬೇಕಾಗುತ್ತದೆ ಎಂದರು.  2021ರಲ್ಲಿ ನಾನು ವಿರೋಧ ಪಕ್ಷದ ನಾಯಕ ಇದ್ದೆ. ಆಗ ನಾನು ಹೇಳಿದ್ದನ್ನು ಕೇಳಿ ಮಾಡುತ್ತಿದ್ದರೆ ಎಂದು ಪ್ರಶ್ನಿಸಿದರು.

 ನೋಟೀಸು ನೀಡಿದರೆ ಉತ್ತರ

ಅಬ್ರಹಾಂ ಅವರು ಚುನಾವಣಾ ಆಯೋಗಕ್ಕೆ  ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಚುನಾವಣಾ ಆಯೋಗ ನೋಟೀಸು ನೀಡಿದರೆ ಉತ್ತರ ಕೊಡಲಾಗುವುದು ಎಂದರು.

ಷಡ್ಯಂತ್ರಕ್ಕೆಲ್ಲ ನಾನು ಹೆದರುವುದಿಲ್ಲ

ಸುಮ್ಮಸುಮ್ಮನೆ ರಾಜಕೀಯ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಿಜೆಪಿಯ ಎಲ್ಲರಿಗೂ ಹೊಟ್ಟೆಯುರಿ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ. ಇಂಥ  ಷಡ್ಯಂತ್ರಕ್ಕೆಲ್ಲ ನಾನು ಹೆದರುವುದಿಲ್ಲ ಎಂದರು.

ನಮ್ಮ ಪ್ರಕರಣ ಹಗರಣವಲ್ಲ: ಸಿಎಂ ಸ್ಪಷ್ಟನೆ

ಮೂಡಾ ಮೊದಲಿನಿಂದಲೂ  ಗಬ್ಬೆದ್ದು ಹೋಗಿದ್ದು, ಅದನ್ನು  ಸ್ವಚ್ಛ ಮಾಡಬೇಕಿದೆ. ನಮ್ಮ ಪ್ರಕರಣ ಹಗರಣವಲ್ಲ.  ನಮ್ಮ ಜಮೀನು ಬಳಕೆ ಮಾಡಿದ್ದಾರೆ. ಅವರ ಪ್ರಕರಣದಲ್ಲಿ ಭೂಮಿ ಕಳೆದುಕೊಂಡವರು ಅಥವಾ 50: 50 ಅನುಪಾನದಲ್ಲಿ ಜಮೀನು ಕೊಟ್ಟಿದ್ದಾರೆ. ನಾವು ಹಾಗೇ ಕೊಟ್ಟಿದ್ದೇವೆಯೇ? ಈ ವತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು.  ನಿವೇಶನ ಮಾಡಿದರೆ ಮೊದಲು 60:40 ಅನುಪಾತವಿತ್ತು. ಈಗ 50: 50 ಮಾಡಿದ್ದಾರೆ ಇದನ್ನು ಯಾರು ಮಾಡಿದ್ದು ಎಂದರು.    

ದುರುಪಯೋಗ ತಡೆಯಲು ತನಿಖೆ

2020 ನೇ  ಇಸವಿಯಲ್ಲಿ ಮೂಡಾ ಅಲ್ಲದೇ ಬೇರೆ ಅಭಿವೃದ್ಧಿ  ಪ್ರಾಧಿಕಾರಗಳಲ್ಲಿಯೂ  50:50 ಅನುಪಾತ ಜಾರಿಗೆ ಬಂದಿದೆ. ಇದರಿಂದ ಅಭಿವೃದ್ಧಿ ಪ್ರಾಧಿಕಾರಗಳಿಗೆ ಲಾಭವಾಗುತ್ತದೆಯೇ ಹೊರತು ನಷ್ಟವಾಗುವುದಿಲ್ಲ. ಭೂಮಾಲೀಕರಿಗೆ ನಷ್ಟವುಂಟಾಗಬಾರದು ಎಂದು ತನಿಖೆ ನಡೆಸಲಾಗುತ್ತಿದೆ. ಮೂಡಾ ಆಯುಕ್ತರು ಮತ್ತಿತರರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ದುರುಪಯೋಗ ತಡೆಯಲು ತನಿಖೆ ನಡೆಸಿ ಸರಿಮಾಡುತ್ತೇವೆ ಎಂದರು.

ವಾಲ್ಮೀಕಿ ಹಗರಣ: ಮೂರು ಸಂಸ್ಥೆಗಳಿಂದ ತನಿಖೆ

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್.ಐ. ಟಿ ಖಜಾನೆ ಇಲಾಖೆಯಿಂದಲೇ  180 ಕೋಟಿ ವರ್ಗಾವಣೆ  ಆಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಖಜಾನೆಯಿಂದ ವರ್ಗಾವಣೆಯಾಗಲು ಸಾಧ್ಯವಿಲ್ಲ. ಖಜಾನೆಯಿಂದ ಇಲಾಖೆಗೆ ಹಣ ಹೋಗಿರುತ್ತದೆ. ಅಲ್ಲಿ ಅವ್ಯವಹಾರವಾಗಿರುವ ಬಗ್ಗೆ ಎಸ್.ಐ. ಟಿ ತನಿಖೆ ಮಾಡುತ್ತಿದೆ ಎಂದರು. ಸಿಬಿಐ, ಎಸ್.ಐ ಟಿ ಮತ್ತು ಇ. ಡಿ. ವತಿಯಿಂದ ಮೂರು ತನಿಖೆಗಳಾಗುತ್ತಿವೆ. ತನಿಖೆ ವರದಿ ಇನ್ನೂ ಬಂದಿಲ್ಲ ಎಂದರು.

ವಾಲ್ಮೀಕಿ ನಿಗಮ ಅವ್ಯವಹಾರ: ವರದಿ ಬಂದ ನಂತರ ಕ್ರಮ

ಆರ್ಥಿಕ ಇಲಾಖೆ ಸಚಿವರಾಗಿರುವ  ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಜಿ. ಟಿ .ದೇವೇಗೌಡರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬ್ಯಾಂಕುಗಳಲ್ಲಿ ಆಗುವ ಅವ್ಯವಹಾರಗಳಿಗೆಲ್ಲಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿಗಳು ರಾಜಿನಾಮೆ ನೀಡಬೇಕಲ್ಲ ಎಂದರು. ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿಯಾಗಲಿ ಅಂತಿಮ ವರದಿಯಾಗಲಿ ಬಂದಿಲ್ಲ. ಆರೋಪಪಟ್ಟಿ ಹಾಕಿದ ಮೇಲೆ ವರದಿ ಬರುತ್ತದೆ ಎಂದರು.

ಖಜಾನೆಯಿಂದ ಹಣ ವರ್ಗಾವಣೆಯಾಗಿರುವುದು ಇಲಾಖೆಯ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ ಪ್ರತಿ ಸಾರಿಯೂ ನನ್ನ ಬಳಿ ಬರುವುದಿಲ್ಲ.  ಎಷ್ಟು ಹಣವಿದೆಯೋ ಅಷ್ಟನ್ನು ಅಧಿಕಾರಿಗಳು ಬಿಡುಗಡೆ ಮಾಡುತ್ತಾರೆ. ಅದಕ್ಕೆ ನನ್ನ ಸಹಿ ಅಗತ್ಯವಿಲ್ಲ. ಪ್ರಕರಣದ ತನಿಖೆ ಇನ್ನೂ ಮುಗಿದೇ ಇಲ್ಲ.   ತನಿಖೆ ಮಾಡಿ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಟನ್ ಸಂಸತ್ತಿಗೆ ಭಾರತೀಯ ಮೂಲದ ಶಿವಾನಿ ರಾಜಾ: ಭಗವದ್ಗೀತೆ ಹೆಸರಲ್ಲಿ ಪ್ರಮಾಣ ಸ್ವೀಕಾರ