Publish Date: Tue, 25 Oct 2016 (19:40 IST)
Updated Date: Tue, 25 Oct 2016 (19:43 IST)
ವಿಧಾನಸೌಧದ ಬಳಿ ಜಪ್ತಿಯಾಗಿದ್ದ 1.97 ಕೋಟಿ ಹಣದ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಆಗ ಸತ್ಯಾಂಶ ಹೊರಬರಲಿದ್ದು, ಯಾರ ಬಳಿ ಸಂಪೂರ್ಣ ಮಾಹಿತಿ ಇತ್ತು ಎನ್ನುವುದು ರಾಜ್ಯದ ಜನತೆಗೆ ಗೊತ್ತಾಗಲಿದೆ ಎಂದು ಹೇಳಿದರು.
ನನ್ನ ವಿರುದ್ಧ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ. ಅವರು ಮಾಡುವ ಆರೋಪಗಳಿಗೆ ಉತ್ತರಿಸುವ ಅವಶ್ಯಕತೆಯೂ ಇಲ್ಲ. ಈ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಜಪ್ತಿಯಾಗಿದ್ದ ಹಣ ಯಾರಿಗೆ ಸೇರಿದೆ ಎನ್ನುವುದು ಬಿಎಸ್‌ವೈಗೆ ಸಂಪೂರ್ಣ ಮಾಹಿತಿ ಇದೆ. ಅವರನ್ನು ವಿಚಾರಿಸಿದರೆ ಹಣ ಯಾರಿಗೆ ಸೇರಿದ್ದು ಹಾಗೂ ಹಣ ಏಲ್ಲಿಗೆ ರವಾನೆಯಾಗುತ್ತಿತ್ತೆಂದು ತಿಳಿದು ಬರುತ್ತದೆ ಎಂದು ನಿನ್ನೆ ಹಾಸನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ