ಬೆಂಗಳೂರು: ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಕಾಲಿಡುವ ಭೀತಿ ಎದುರಾಗಿದೆ. ಈಗಾಗಲೇ ಡೆಂಗ್ಯೂ ಪ್ರಕರಣಗಳಿಂದ ದಾಖಲೆ ಮಾಡಿರುವ ಬೆಂಗಳೂರಿಗೆ ನಿಫಾ ವೈರಸ್ ಭೀತಿ ಎದುರಾಗಿದೆ.
ಬಾವಲಿಯ ಜೊಲ್ಲು ರಸದಿಂದ ಹರಡುವ ಮಾರಣಾಂತಿಕ ರೋಗ ನಿಫಾ ವೈರಸ್. ಈ ವೈರಸ್ ಗೆ ಈಗಾಗಲೇ ಕೇರಳದಲ್ಲಿ ಸಾವು-ನೋವುಗಳಾಗಿವೆ. ಇನ್ನೂ ಇದಕ್ಕೆ ಸರಿಯಾದ ಚಿಕಿತ್ಸೆ ಪತ್ತೆ ಮಾಡಲಾಗಿಲ್ಲ. ಇದೀಗ ಕೇರಳದಾದ್ಯಂತ ನಿಫಾ ವೈರಸ್ ಭೀತಿಯಿದೆ. ಅದರ ನಡುವೆ ಈಗ ಬೆಂಗಳೂರಿಗೂ ನಿಫಾ ವೈರಸ್ ಭೀತಿ ಕಾಡಿದೆ.
ಮನುಷ್ಯರಿಗೆ ಈ ಸೋಂಕು ತಗುಲಿದರೆ ಇನ್ನೊಬ್ಬರಿಗೆ ಹರಡುತ್ತದೆ. ಇದು ತೀವ್ರವವಾದರೆ ಸಾವೇ ಗತಿ. ಹೀಗಾಗಿ ಕೇರಳದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಅನೇಕರು ಬೆಂಗಳೂರಿಗೆ ಬರುತ್ತಾರೆ. ಹೀಗಾಗಿ ಇಲ್ಲಿ ನಿಫಾ ವೈರಸ್ ಹರಡುವ ಭೀತಿಯಿದೆ. ತೀವ್ರ ಜ್ವರ, ತಲೆನೋವು, ವಾಂತಿ, ಮಾಂಸಖಂಡಗಳಲ್ಲಿ ನೋವು ಇತ್ಯಾದಿ ಇದರ ಲಕ್ಷಣಗಳು. ರೋಗ ಉಲ್ಬಣಗೊಂಡಂತೆ ಮಾನಸಿಕವಾಗಿ ಭ್ರಮೆಗೊಳಗಾಗುತ್ತೇವೆ. ಮೆದುಳಿನಲ್ಲಿ ಉರಿಯೂತ ಸಂಭವಿಸಬಹುದಾಗಿದೆ. ಬಳಿಕ ರೋಗಿಯು ಕೋಮಾ ಸ್ಥಿತಿಗೆ ಜಾರಬಹುದು. ಹೀಗಾಗಿ ಮನೆಗಳ ಬಳಿ ಸ್ವಚ್ಛತೆ ಕಾಪಾಡುವುದು, ಪ್ರಾಣಿಗಳು ಕೆರೆದ, ಗೀರಿದ ಗಾಯಗಳಿರುವ ಹಣ್ಣು, ತರಕಾರಿಗಳನ್ನು ಸೇವಿಸದೇ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.