ಬೆಂಗಳೂರು: ಉತ್ತರ ಪ್ರದೇಶ ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕಿ ಅತುಲ್ ಸುಭಾಷ್ ಪ್ರಕರಣದ ಒಂದೊಂದೇ ವಿಚಾರಗಳು ಈಗಬಯಲಾಗುತ್ತಿದೆ. ಅತುಲ್ ವಿರುದ್ಧ ಪತ್ನಿ ನಿಖಿತಾ ನೀಡಿದ್ದ ವರದಕ್ಷಿಣೆ ಕಿರುಕುಳ ಕೇಸ್ ಗಟ್ಟಿಯಾಗಲು ಇದೊಂದು ಅಂಶ ಕಾರಣವಾಗಿತ್ತು ಎನ್ನಲಾಗಿದೆ.
ಅತುಲ್ ಸುಭಾಷ್ ವಿರುದ್ಧ ನಿಖಿತಾ ಸುಮಾರು 9 ಕೇಸ್ ಹಾಕಿದ್ದಳು. ವರದಕ್ಷಿಣೆ ಕಿರುಕುಳ, ಗೃಹಹಿಂಸೆ, ಲೈಂಗಿಕ ಕ್ರೌರ್ಯ ಸೇರಿದಂತೆ ಕಾನೂನಿನಲ್ಲಿ ಅವಕಾಶವಿರುವ ಎಲ್ಲಾ ಕೇಸ್ ಗಳನ್ನು ಅತುಲ್ ಮೇಲೆ ಹಾಕಲಾಗಿತ್ತು. ನಿಖಿತಾ ಸಿಂಘಾನಿಯಾ ಕಿರುಕುಳ ತಾಳಲಾರದೇ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಸಾವಿಗೆ ಮುನ್ನ ಎಲ್ಲವನ್ನೂ ಡೆತ್ ನೋಟ್ ನಲ್ಲಿ ವಿವರವಾಗಿ ಬರೆದಿದ್ದ.
ಅದರಂತೆ ನಿಖಿತಾ ನೀಡಿದ್ದ ವರದಕ್ಷಿಣೆ ಕಿರುಕುಳ ಕೇಸ್ ಗಟ್ಟಿಯಾಗಿತ್ತು. ಇದಕ್ಕೆ ಕಾರಣ ನಿಖಿತಾ, ಅತುಲ್ ಮನೆಯವರು 10 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರು. ಇದರಿಂದ ಆಘಾತಗೊಂಡು ನನ್ನ ತಂದೆ ಸಾವನ್ನಪ್ಪಿದ್ದರು ಎಂದು ನಿಖಿತಾ ಆರೋಪಿಸಿದ್ದಳು. ಇದೇ ಕಾರಣಕ್ಕೆ ಕೇಸ್ ಗಟ್ಟಿಯಾಗಿತ್ತು.
2022 ರಲ್ಲಿ ನಿಖಿತಾ ದೂರು ನೀಡಿದ್ದಳು. ನನ್ನ ತಂದೆ 10 ವರ್ಷದಿಂದ ಮಧುಮೇಹ, ಹೃದಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅತುಲ್ ಮನೆಯವರ ಕಿರುಕುಳದಿಂದ ಆಘಾತಗೊಂಡು 2019 ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಬಳಿಕ ಅವರು ಸಾವನ್ನಪ್ಪಿದ್ದರು. ನನ್ನ ತಂದೆಯ ಸಾವಿಗೆ ಅತುಲ್ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದರು.