ನವದೆಹಲಿ: ಬೆಂಗಳೂರಿನ ಟೆಕಿ ಅತುಲ್ ಸುಭಾಷ್ ಪತ್ನಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ, ನಟಿ ಕಂಗನಾ ರನೌತ್ ಶೇ.99 ರಷ್ಟು ಪ್ರಕರಣಗಳಲ್ಲಿ ಪುರುಷರದ್ದೇ ತಪ್ಪಿರುತ್ತದೆ ಎಂದಿದ್ದಾರೆ.
ಅವರ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕಿ ಅತುಲ್ ಸುಭಾಷ್ ತಮ್ಮ ಪತ್ನಿ ವರದಕ್ಷಿಣೆ ಕಿರುಕುಳ ಸೇರಿದಂತೆ ಹೆಣ್ಣು ಮಕ್ಕಳಿಗೆ ಅನುಕೂಲವಾಗಿರುವ ಕಾನೂನು ದುರ್ಬಳಕೆ ಮಾಡಿಕೊಂಡು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾಳೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ದೇಶದಾದ್ಯಂತ ಸದ್ದು ಮಾಡಿದೆ. ಪುರುಷರೂ ವರದಕ್ಷಿಣೆ ಕಿರುಕುಳ ನೆಪದಲ್ಲಿ ಹಿಂಸೆ ಅನುಭವಿಸುತ್ತಿದ್ದಾರೆ. ಅವರಿಗೂ ನ್ಯಾಯ ಸಿಗಬೇಕು ಎಂದು ಅಭಿಯಾನವನ್ನೇ ಆರಂಭಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಇದೀಗ ಸಂಸದೆ ಕಂಗನಾ ರನೌತ್ ಪ್ರತಿಕ್ರಿಯಿಸಿದ್ದಾರೆ. ಅತುಲ್ ಸುಭಾಷ್ ಪ್ರಕರಣ ನಿಜಕ್ಕೂ ದುರಂತ. ನಾನು ಆತನ ವಿಡಿಯೋ ನೋಡಿದೆ, ಅದು ಹೃದಯ ವಿದ್ರಾವಕವಾಗಿತ್ತು. ಮಹಿಳೆಯರ ಪರವಾಗಿರುವ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಗಂಡನಿಂದ ಹಣ ಪೀಕುವಂತಹ ಪ್ರಕರಣಗಳು ಖಂಡನೀಯ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಕಾನೂನನ್ನು ಯಾರೂ ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದು. ಆದರೆ ಶೇ.99 ರಷ್ಟು ಪ್ರಕರಣಗಳಲ್ಲಿ ಪುರುಷರದ್ದೇ ತಪ್ಪಿರುತ್ತದೆ. ಒಬ್ಬ ತಪ್ಪು ಮಾಡಿದ ಮಹಿಳೆಯಿಂದಾಗಿ ನಿಜವಾಗಿಯೂ ಕಷ್ಟ ಅನುಭವಿಸುತ್ತಿರುವ ಇತರೆ ಮಹಿಳೆಯರನ್ನು ಅದೇ ದೃಷ್ಟಿಯಿಂದ ನೋಡಬಾರದು ಎಂದು ಕಂಗನಾ ಹೇಳಿದ್ದಾರೆ.