ಬೆಂಗಳೂರು: ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆದಿರುವುದೇ ಅನುಮಾನ ಎಂದಿದ್ದ ಶಾಸಕ ರಮೇಶ್ ಬಂಡಿಸಿದ್ದೇಗೌಡಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿಗೆ ಚುನಾವಣೆ ಹತ್ತಿರ ಬಂದಾಗ ಅನಾರೋಗ್ಯವಾಗುತ್ತದೆ. ಶಾಸಕ ಚೆಲುವರಾಯ ಸ್ವಾಮಿಗೂ ಇದೇ ಖಾಯಿಲೆಯಿದೆ. ಆದರೆ ಅವರು ಚಿಕಿತ್ಸೆಗೆ ಹೋದರೆ ಒಂದು ತಿಂಗಳು ಸಮಯ ಬೇಕಾಗುತ್ತದೆ. ಆದರೆ ಕುಮಾರಸ್ವಾಮಿ ಎರಡೇ ದಿನದಲ್ಲಿ ಹೇಗೆ ಬರುತ್ತಾರೆ ಎಂದು ಶಾಸಕ ಬಂಡಿಸಿದ್ದೇಗೌಡ ಅನುಮಾನ ವ್ಯಕ್ತಪಡಿಸಿದ್ದರು.
ಇದಕ್ಕೀಗ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇಂತಹ ಹೇಳಿಕೆ ನೀಡುವುದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ನಮ್ಮ ತಂದೆಗೆ ಮೂರನೇ ಬಾರಿ ವಾಲ್ ರಿಪ್ಲೇಸ್ ಮೆಂಟ್ ಮಾಡಿರುವುದು ನಿಜ. ಅದನ್ನು ನಾವು ಯಾರಿಗೂ ಪ್ರೂವ್ ಮಾಡಬೇಕಾಗಿಲ್ಲ ಎಂದಿದ್ದಾರೆ.
ನಾವು ಸುಮ್ಮ ಸುಮ್ಮನೇ ಕಣ‍್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಂಡು ಮತ ಕೇಳಬೇಕಾಗಿಲ್ಲ. ನಾವು ಕಣ‍್ಣೀರು ಹಾಕಿದ್ದರೆ ಅದು ರಾಜ್ಯದ ಜನರಿಗಾಗಿ ಅಷ್ಟೇ ಹೊರತು ನಮ್ಮ ವೈಯಕ್ತಿಕ ಲಾಭಕ್ಕೆ ಕಣ್ಣೀರು ಹಾಕಿಲ್ಲ. ಕಳೆದ 6 ವರ್ಷಗಳಲ್ಲಿ ಮೂರನೇ ಬಾರಿಗೆ ಅವರಿಗೆ ಹೃದಯ ಶಸ್ತ್ರಚಿಕಿತ್ಸೆಯಾಗಿರುವುದು. ಕುಮಾರಣ್ಣ ಎಲ್ಲೇ ನಿಂತರೂ ಜನ ಬೆಂಬಲಿಸುತ್ತಾರೆ. ಮಂಡ್ಯದಲ್ಲಿ ಚುನಾವಣೆಗೆ ನಿಲ್ಲಬೇಕೆಂಬುದು ಜನರ ಆಶಯವಾಗಿತ್ತು. ಅದರಂತೆ ಇಲ್ಲಿ ಚುನಾವಣೆಗೆ ನಿಂತಿದ್ದಾರೆ. ಸುಮಲತಾ ಬಳಿ ಹೋಗಿ ಬೆಂಬಲ ಕೇಳುತ್ತೇವೆ ಎಂದಿದ್ದಾರೆ.