Publish Date: Mon, 29 Jun 2026 (22:30 IST)
Updated Date: Mon, 29 Jun 2026 (22:35 IST)
ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಮೇಲಿನ ಚಪ್ಪಲಿ ಎಸೆತ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಜೆಡಿಎಸ್ ಹಾಗೂ ಬಿಜೆಪಿ(BJP) ಕಾರ್ಯಕರ್ತರನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಭೇಟಿಮಾಡಿದರು. ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಕರ್ತ ಅಖಿಲ್ ರೆಡ್ಡಿ ಬಂಧನದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಮವಾರ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದರು. ಮೊದಲು ಅಖಿಲ್ ರೆಡ್ಡಿ ಅವರ ಮನೆಗೆ ಭೇಟಿ ನೀಡಲು ನಿಗದಿಯಾಗಿದ್ದರೂ, ಬಳಿಕ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿ ಮಧ್ಯಾಹ್ನ 1 ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಕನಕನೂರು ಸಮೀಪದ ಜಿಲ್ಲಾ ಕಾರಾಗೃಹಕ್ಕೆ ತೆರಳಿದರು.
ಜೈಲಿನಲ್ಲಿರುವ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ವೇಳೆ ಜೆಡಿಎಸ್ ಶಾಸಕ ರವಿ, ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ತೂಪಲ್ಲಿ ಚೌಡರೆಡ್ಡಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಸೇರಿದಂತೆ ಹಲವು ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಇದ್ದರು.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ನಾಯಕರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅದೇ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರು ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಜೈಲಿನಲ್ಲಿರುವವರು ಅಪರಾಧ ಮಾಡುವ ಮನಸ್ಥಿತಿಯವರಲ್ಲ ಎಂದು ಆರೋಪ ಮಾಡಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ