ಬೆಂಗಳೂರು: ನಿಖಿಲ್ ಕುಮಾರಸ್ವಾಮಿಯವರನ್ನು ಚನ್ನಪಟ್ಟಣದ ಎನ್‍ಡಿಎ ಅಭ್ಯರ್ಥಿ ಎಂದು ಘೋಷಿಸಿದ್ದೇವೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಮಾಧ್ಯಮದವರ ಜೊತೆ ಇಂದು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಇದೆ. ಮೋದಿಯವರ ಪಕ್ಷದಿಂದ ಬೆಂಬಲ ಇರುವ ಕಾರಣ ಗೆಲುವು ಖಚಿತ. ಕುಮಾರಸ್ವಾಮಿ, ಅಶೋಕ್ ಅವರು ಮತ್ತು ಎಲ್ಲ ಮುಖಂಡರು ಒಟ್ಟಾಗಿ ಸೇರಿದ್ದೇವೆ. ಇದು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯಲ್ಲ; ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.
ನಿಖಿಲ್ ಕುಮಾರಸ್ವಾಮಿಯವರು ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಎನ್‍ಡಿಎ ಪಕ್ಷಗಳಾದ ಬಿಜೆಪಿ- ಜೆಡಿಎಸ್ ಪಕ್ಷಗಳ ಎಲ್ಲ ಪ್ರಮುಖರು ಒಟ್ಟಾಗಿ ಅಲ್ಲಿ ಪ್ರವಾಸ ಮಾಡುತ್ತೇವೆ. ನಾನು ಬೇರೆಯವರ ಬಗ್ಗೆ ಒಂದು ಶಬ್ದ ಮಾತನಾಡಲು ಇಷ್ಟ ಪಡುವುದಿಲ್ಲ ಎಂದು ತಿಳಿಸಿದರು. ಪಕ್ಷಾಂತರ ಮಾಡಿದವರ ಬಗ್ಗೆ ಮಾತನಾಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಜೆಡಿಎಸ್ ಪಕ್ಷದ ನಾಯಕ ಸುರೇಶ್ ಬಾಬು, ಬಿಜೆಪಿ-ಜೆಡಿಎಸ್ ಪ್ರಮುಖರು ಇದ್ದರು.<>