ಬೆಂಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಕೊನೆಗೂ ಫೈನಲ್ ಆಗಿದೆ. ಇದೀಗ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಗುರುವಾರ ಘೋಷಿಸಿದ್ದಾರೆ.
ಇದರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿದಿರುವ ಸಿಪಿ ಯೋಗೇಶ್ವರ್ ಅವರಿಗೆ ಎದುರಾಳಿ ಯಾರೆಂಬ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಇಂದು ಜೆಡಿಎಸ್ ಕಚೇರಿಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಸಂಬಂಧ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಕಾರ್ಯಕರ್ತರು ನಿಖಿಲ್ ಅವರೇ ಅಭ್ಯರ್ಥಿ ಆಗಬೇಕು ಅನ್ನೋ ಒತ್ತಾಯ ಮಾಡಿದರು. ಈ ಸಭೆಯಲ್ಲಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಸಮ್ಮುಖದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ನಿಮ್ಮ ಒತ್ತಡಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ಧ ಎಂದು ಘೋಷಣೆ ಮಾಡಿದ್ದಾರೆ. ಖುದ್ದು ನಿಖಿಲ್ ಅವರ ಈ ಮಾತಿನಿಂದ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸುವುದು ಫಿಕ್ಸ್ ಆಗಿದೆ.
ಇದರಿಂದ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿಯೋ ಲೆಕ್ಕಾಚಾರ ಅಂತಿಮವಾಗಿದೆ. ಅಧಿಕೃತವಾಗಿ ಘೋಷಣೆ ಮಾಡುವುದು ಮಾತ್ರವೇ ಬಾಕಿ ಉಳಿದಿದೆ.