ಬೆಂಗಳೂರು: ಚಾಮುಂಡಿ ಬೆಟ್ಟ, ತಾಯಿ ಎಲ್ಲಾ ಧರ್ಮದವರಿಗೆ ಸೇರಿದ್ದು ಎಂದ ಡಿಸಿಎಂ ಡಿಕೆ ಶಿವಕುಮಾರ್ ಗೆ ನೆಟ್ಟಿಗರು ತಿರುಗೇಟು ಕೊಟ್ಟಿದ್ದು, ಹಾಗಿದ್ದರೆ ಅನ್ಯ ಧರ್ಮೀಯರ ಮನೆಯಲ್ಲೂ ಚಾಮುಂಡಿ ತಾಯಿ ಫೋಟೋ ಹಾಕ್ಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಬಾನು ಮುಷ್ತಾಕ್ ಈ ಬಾರಿ ದಸರಾ ಉದ್ಘಾಟನೆ ಮಾಡುತ್ತಿರುವುದು ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ತಿರುಗೇಟು ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟದ ಆಸ್ತಿ ಸರ್ಕಾರದ್ದು. ಚಾಮುಂಡಿ ತಾಯಿ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಆಕೆ ನಾಡಿನ ಶಕ್ತಿದೇವತೆ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮುಖಾಂತರ ಹೇಳಿದ್ದರು.
ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ. ಚಾಮುಂಡಿ ದೇವತೆ ಹಿಂದೂಗಳ ಆಸ್ತಿ. ಹಿಂದೂ ಧರ್ಮದವರನ್ನು ಬಿಟ್ಟು ಬೇರೆ ಧರ್ಮೀಯರು ಇಲ್ಲಿ ಪೂಜೆ ಮಾಡಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಎಲ್ಲಾ ಧರ್ಮದವರಿಗೂ ಸೇರಿದ್ದು ಎಂದಾದರೆ ಎಲ್ಲಾ ಧರ್ಮದವರೂ ಬಂದು ಇಲ್ಲಿ ಪೂಜೆ ಮಾಡ್ತಾರಾ? ಯಾರಾದರೂ ಅನ್ಯಧರ್ಮೀಯರ ಮನೆಯಲ್ಲಿ ಚಾಮುಂಡಿ ತಾಯಿಯ ಫೋಟೋ ಇರುತ್ತಾ? ಹಾಕ್ಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.