Select Your Language

Notifications

webdunia
webdunia
webdunia
webdunia

ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ವಿದ್ಯಾರ್ಥಿಗಳ ಪರ: ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ

ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ವಿದ್ಯಾರ್ಥಿಗಳ ಪರ: ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ
bangalore , ಮಂಗಳವಾರ, 7 ಸೆಪ್ಟಂಬರ್ 2021 (21:13 IST)
ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ ಯಾರ ವಿರುದ್ಧವೂ ಅಲ್ಲ. ಇದು ಕೇವಲ ವಿದ್ಯಾರ್ಥಿಗಳ ಪರ ಮತ್ತು ರಾಷ್ಟ್ರದ ಪರ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು. 
 
ಇಲ್ಲಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತತೆ), ಮಹಾರಾಣಿ ಮಹಿಳಾ ಕಲಾ ಕಾಲೇಜು, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಎನ್‌ಇಪಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಸಚಿವರು ಮಾತನಾಡಿದರು. 
 
ಇಂದು ರಾಜ್ಯದ ಎಲ್ಲಾ ಸರ್ಕಾರಿ ಪದವಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಶಿಕ್ಷಣ ನೀತಿ ಕುರಿತು ವಿಚಾರಗೋಷ್ಠಿಗಳು ನಡೆಯುತ್ತಿವೆ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿಯ ಬಗ್ಗೆ ಎಲ್ಲಾ ವಿಧ್ಯಾರ್ಥಿಗಳಿಗೆ ತಿಳಿಯಬೇಕಿದೆ ಎಂದು ಅವರು ನುಡಿದರು. 
 
75 ವರ್ಷಗಳ ನಂತರ ನಮ್ಮ ದೇಶದಲ್ಲಿ ಜಾರಿಗೆ ಬಂದಿರುವ ಕ್ರಾಂತಿಕಾರಿ ಸುಧಾರಣೆ ಎಂದರೆ ಶಿಕ್ಶಣ ನೀತಿ ಮಾತ್ರ ಎಂದು ನಾನು ಘಂಟಾಘೋಷವಾಗಿ ಹೇಳಬಲ್ಲೆ. ರಾಷ್ಟ್ರ ನಿರ್ಮಾಣಕ್ಕೆ ಹಾಗೂ ಸಮಾಜವನ್ನು ಸಮಗ್ರವಾಗಿ ಮುಂದಕ್ಕೆ ತೆಗೆದುಕೊಂಡು ಹೋಗಲು ಇದು ಸಹಕಾರಿ. ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ದೂರದೃಷ್ಟಿಯಿಂದ ಈ ನೀತಿಯನ್ನು ಜಾರಿಗೆ ತಂದಿದ್ದಾರೆಂದು ಸಚಿವರು ಹೇಳಿದರು. 
 
ಒಂದು ಸತ್ಯವನ್ನು ಎಲ್ಲರೂ ಅರಿತುಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಸರ್ವ ಸಮಸ್ಯೆಗಳೂ  ಬಗೆಹರಿಯುತ್ತವೆ. ಪ್ರಗತಿಗೆ ಶಿಕ್ಷಣ ಮಾತ್ರ ʼಏಕೈಕ ರಾಜಮಾರ್ಗʼ. ಶಿಕ್ಷಣದ ಹೊರತಾಗಿ ನಾವು ಯಾವ ಸಾಧನೆಯನ್ನೂ ಮಾಡಲು ಸಾಧ್ಯವಿಲ್ಲ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು. 
 
ಈ ವರ್ಷ ಶೈಕ್ಷಣಿಕ ಸುಧಾರಣೆಗಳು: 
 
ಶಿಕ್ಷಣ ನೀತಿ ಜಾರಿಗೆ ಹದಿನೈದು ವರ್ಷಗಳ ಕಾಲಾವಕಾಶವನ್ನು ಕೇಂದ್ರ ಸರಕಾರ ನಿಗದಿ ಮಾಡಿದೆ. ಆದರೆ, ರಾಜ್ಯ ಸರಕಾರ ಮೊದಲ ವರ್ಷ ಶೈಕ್ಷಣಿಕವಾಗಿ ಸುಧಾರಣೆಗಳನ್ನು ಜಾರಿ ಮಾಡಲಿದೆ. ನಂತರದ ದಿನಗಳಲ್ಲಿ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದರು. 
 
ಯಾವುದೇ ಕಾರಣಕ್ಕೂ ಶಿಕ್ಷಣ ನೀತಿಯನ್ನು ಆತುರಾತುರವಾಗಿ ಜಾರಿಗೆ ತರುತ್ತಿಲ್ಲ. ಡಾ.ಕೆ.ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ಐದೂವರೆ ವರ್ಷ ಕಾಲ ಶ್ರಮಿಸಿದ ಫಲವೇ ಈ ಶಿಕ್ಷಣ ನೀತಿ ಎಂದು ಸಚಿವರು ವಿವರಿಸಿದರು. 
 
ರಾಜಕೀಯ ಟೀಕೆ ಸರಿಯಲ್ಲ: 
 
ಕೆಲ ನಾಯಕರು ಈ ನಡುವೆ ರಾಷ್ಟ್ರೀಯ ಶಿಕ್ಶಣ ನೀತಿಯನ್ನು ಜಿದ್ದಿಗೆ ಬಿದ್ದು ಟೀಕೆ ಮಾಡುತ್ತಿದ್ದಾರೆ. ಅವರು ಇಡೀ ನೀತಿಯನ್ನು ಓದಬೇಕು. ಅವರು ನೀತಿಯನ್ನು ಓದಿ ಟೀಕೆ ಮಾಡುತ್ತಿದ್ದಾರಾ? ಅಥವಾ ಸುಖಾ ಸುಮ್ಮನೆ ಟೀಕೆ ಮಾಡುತ್ತಿದ್ದಾರಾ? ಎನುವ ಅನುಮಾನ ನನ್ನದು. ಅವರು ಇಡೀ ನೀತಿಯನ್ನು ಸಮಗ್ರವಾಗಿ ಓದಿ ಟೀಕೆ ಮಾಡುತ್ತಿರುವ ರೀತಿ ಅನಿಸುತ್ತಿಲ್ಲ. ದಯಮಾಡಿ ಅವರು ಮೊದಲು ಶಿಕ್ಷಣ ನೀತಿ ಓದಿ, ನಂತರ ತಪ್ಪಿದ್ದರೆ ತೋರಿಸಲಿ. ಆದರೆ ಯಾರೂ ನ್ಯೂನತೆಗಳನ್ನು ತೋರಿಸುವ ಬದಲು ಅನಗತ್ಯ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಚಿವರು ಅಭಿಪ್ರಾಯಪಟ್ಟರು. 
 
ಶಾಸಕ ಎಲ್ ನಾಗೇಂದ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‌ ಕುಮಾರ್‌, ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
 
ಇದೇ ವೇಳೆ ಸಚಿವರು ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಜತೆ ಶಿಕ್ಷಣ ನೀತಿಯ ಬಗ್ಗೆ ಸಂವಾದ ನಡೆಸಿದರು ಹಾಗೂ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
education

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮವಾಗಿ ಭಾರತದೊಳಗೆ ನುಸಳಿ ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ 13 ಮಂದಿ