ಬೆಂಗಳೂರು: ಮೈಸೂರು ರಾಜವಂಶಸ್ಥ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನ್ಮಜಯಂತಿ ಇಂದು. ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಏಕೈಕ ಪುತ್ರರಾದ ಶ್ರೀಕಂಠದತ್ತ ಒಡೆಯರ್ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ.
ಶ್ರೀಕಂಠದತ್ತ ಒಡೆಯರ್ ಅವರು ಜನಿಸಿದ್ದು 1953, ಫೆಬ್ರವರಿ 20 ರಂದು. ಅವರಿಗೆ ಐವರು ಸಹೋದರಿಯರು. ಜಯಚಾಮರಾಜೇಂದ್ರ ಒಡೆಯರ್ ಬಳಿಕ ಮೈಸೂರು ರಾಜರಾಗಿ ಪಟ್ಟಕ್ಕೇರಿದವರು ಶ್ರೀಕಂಠದತ್ತ ಒಡೆಯರ್ ಅವರು. 1974 ರಿಂದ ದಸರಾ ಸಂದರ್ಭದಲ್ಲಿ ರಾಜರ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದ್ದರು. ವಿಪರ್ಯಾಸವೆಂದರೆ ಅವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ 2013 ರಲ್ಲಿ ಶ್ರೀಕಂಠದತ್ತ ಒಡೆಯರ್ ಮರಣದ ನಂತರ ರಾಣಿ ಪ್ರಮೋದಾ ದೇವಿ ಯದುವೀರ ಒಡೆಯರ್ ಅವರನ್ನು ದತ್ತು ಪಡೆದರು.
ಸಂಸದರಾಗಿದ್ದ ಒಡೆಯರ್: ರಾಜನಾಗಿ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಾಯಕರಾಗಿ ಕರ್ತವ್ಯ ಸಲ್ಲಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದಲ್ಲಿ ಕೆಲಸ ಮಾಡಿದ್ದರು.
ಮೈಸೂರು ಸಿಲ್ಕ್ ಸೀರೆಗಳನ್ನು ಪ್ರಚುರಪಡಿಸಿದ್ದರು: ಕೇವಲ ಆಡಳಿತಗಾರನಾಗಿ ಅಲ್ಲದೆ, ಫ್ಯಾಶನ್ ಡಿಸೈನ್ ನಲ್ಲೂ ಅವರಿಗೆ ಆಸಕ್ತಿಯಿತ್ತು. ಮೈಸೂರು ಸಿಲ್ಕ್ ಸೀರೆಗಳನ್ನು ಪ್ರಚುರಪಡಿಸುವಲ್ಲಿ ಅವರ ಕೊಡುಗೆ ಅಪಾರ.
ನಾಸ್ತಿಕರಾಗಿದ್ದರು: ಆರಂಭದಲ್ಲಿ ದೇವರು, ಪೂಜೆ ಇತ್ಯಾದಿ ಆಸ್ತಿಕ ಆಚರಣೆಗಳಲ್ಲಿ ಅವರಿಗೆ ಆಸಕ್ತಿಯೇ ಇರಲಿಲ್ಲ. ಬಳಿಕ ಹಿಂದೂ ಧರ್ಮದಲ್ಲಿ ಅಪಾರ ಗೌರವ ಹೊಂದಿದ್ದರು.
ಕ್ರಿಕೆಟ್ ನಲ್ಲೂ ಸಕ್ರಿಯ: ಶ್ರೀಕಂಠದತ್ತ ಒಡೆಯರ್ ಗೆ ಕ್ರಿಕೆಟ್ ಎಂದರೆ ಬಲುಪ್ರೀತಿ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದರು.
ಜನರ ಪ್ರೀತಿಯ ಮಹಾರಾಜ: ಎಲ್ಲರಿಗೂ ಜನರಿಂದ ಪ್ರೀತಿಯಿಂದ ಮಹಾರಾಜ ಎಂದು ಕರೆಯಿಸಿಕೊಳ್ಳುವ ಭಾಗ್ಯವಿರುವುದಿಲ್ಲ. ಆದರೆ ಶ್ರೀಕಂಠದತ್ತ ಒಡೆಯರ್ ಅವರ ಗತ್ತು, ಗಾಂಭೀರ್ಯದಿಂದಾಗಿ ಜನರು ಅವರನ್ನು ಮಹಾರಾಜ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.