ಇಂದು ಸಂಸತ್ನಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಡೀ ವಿಶ್ವವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ವಿಶ್ವ ದೇಶಗಳು ಭಾರತದಿಂದ ನೆರವು ನಿರೀಕ್ಷಿಸುವ ಹಂತಕ್ಕೆ ಪರಿವರ್ತನೆ ಆಗಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು. ತಮ್ಮ ಭಾಷಣದಲ್ಲಿ ದ್ರೌಪದಿ ಮುರ್ಮು ಸರ್ಕಾರದ ಕಾರ್ಯನಿರ್ವಹಣೆಯ ರೀತಿಯನ್ನು ಬಣ್ಣಿಸಲು ಬಸವಣ್ಣ ವಿರಚಿತ ಕಾಯಕವೇ ಕೈಲಾಸ ವಚನವನ್ನು ಉಲ್ಲೇಖಿಸಿದರು. ಬಸವೇಶ್ವರರ ಕಾಯಕವೇ ಕೈಲಾಸ ಮಾತಿನಂತೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ. ಭಾರತದಲ್ಲಿ ಬಡವರ ಅಭಿವೃದ್ಧಿಗೆ ಕೆಲಸಗಳು ನಡೆಯುತ್ತಿವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮುರ್ಮು ತಮ್ಮ ಭಾಷಣದಲ್ಲಿ ಹೇಳಿದರು.