ಉಡುಪಿ: ಕೇರಳ, ತಮಿಳುನಾಡು, ಕರ್ನಾಟಕಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ನಕ್ಸಲ್ ನಿಗ್ರಹ ಪಡೆ ನಡೆಸಿದ ಕಾರ್ಯಾಚಾರಣೆಯಲ್ಲಿ ಎನ್ ಕೌಂಟರ್ ಆಗಿ ಹತ್ಯೆಯಾಗಿದ್ದಾನೆ.
ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹಲವು ಪ್ರಕರಣದಲ್ಲಿ ಪೊಲೀಸರು ಈತನಿಗಾಗಿ ಹುಡುಕಾಡುತ್ತಿದ್ದರು. ವಿಕ್ರಂ ಗೌಡ ನಕ್ಸಲ್ ದಳದ ನೇತ್ರಾವತಿ ಗುಂಪಿನ ನಾಯಕ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಇದಲ್ಲದೆ ಹಲವು ನಕ್ಸಲ್ ಚಟುವಟಿಕೆಗಳಿಗೆ ನೇತೃತ್ವ ವಹಿಸಿದ್ದ.
ಹತ್ತು ವರ್ಷಗಳ ಹಿಂದೆಯೇ ಈತನ ಪತ್ತೆಗೆ ಪೊಲೀಸರು 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಈತನ ಮೇಲೆ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸುಮಾರು 50 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಕೇರಳದಲ್ಲಿ ಇತ್ತೀಚೆಗೆ ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿತ್ತು. ಅಲ್ಲಿ ಪೊಲೀಸ್ ಕಾರ್ಯಾಚರಣೆ ಚುರುಕಾಗುತ್ತಿದ್ದಂತೇ ಈ ತಂಡ ಕರ್ನಾಟಕಕ್ಕೆ ಬಂದಿತ್ತು. ಈ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಟುವಟಿಕೆ ಚುರುಕುಗೊಳಿಸಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ವಿಕ್ರಂ ಗೌಡ ಕತೆ ಮುಗಿದಿದೆ.