Publish Date: Mon, 14 Sep 2026 (14:58 IST)
Updated Date: Mon, 14 Sep 2026 (14:59 IST)
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ವಾತಾವರಣ ಮುಂದುವರಿಯಲಿದೆ ಹಾಗೂ ಗರಿಷ್ಠ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಹಾಗೂ ಒಳನಾಡಿನ ಬಹುತೇಕ ಭಾಗಗಳಲ್ಲಿ ಮಳೆ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಶುಷ್ಕ ವಾತಾವರಣ ಆವರಿಸಿದೆ. ಮಳೆ ಮೋಡಗಳ ಕೊರತೆಯಿಂದಾಗಿ ನೇರ ಸೂರ್ಯನ ಬೆಳಕು ಬೀಳುತ್ತಿದ್ದು, ಕರಾವಳಿ, ಹಳೆ ಮೈಸೂರು ಭಾಗ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ರಿಂದ 3°C ನಷ್ಟು ತಾಪಮಾನ ಏರಿಕೆಯಾಗಿದೆ.
ಪ್ರಸಕ್ತ ಸೆಪ್ಟೆಂಬರ್ ತಿಂಗಳಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಇರುವುದು ಕೃಷಿ ಚಟುವಟಿಕೆಗಳ ಮೇಲೆಯೂ ಪ್ರಭಾವ ಬೀರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಕೆಲವೇ ಪ್ರದೇಶಗಳಲ್ಲಿ ಮಾತ್ರ ಮೋಡಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಹಗುರ ತುಂತುರು ಮಳೆಯಾಗುವ ಸಾಧ್ಯತೆಯಿದೆ.
ಈ ತಿಂಗಳು ಒಣ ಹವೆಯಿಂದ ತಾಪಮಾನದಲ್ಲಿಯೂ ಏರಿಕೆಯಾಗಿದ್ದು, ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದ್ದು, ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗಿದೆ. ಗದಗ, ಬಾಗಲಕೋಟೆ, ವಿಜಯಪುರ, ರಾಯಚೂರು ಸೇರಿ ಕೆಲ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಬೆಂಗಳೂರಿನಲ್ಲಿಯೂ ತಾಪಮಾನ ಏರಿಕೆಯಾಗಿದ್ದು, 33 ಡಿಗ್ರಿ ಸೆಲ್ಸಿಯಸ್‌ಗೆ ಗರಿಷ್ಠ ಉಷ್ಣಾಂಶ ತಲುಪಿದೆ.
ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ ಒಂದು ವಾರ ಒಣ ಹವೆ ಇರುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೊಡಗು, ರಾಮನಗರ ಜಿಲ್ಲೆಯ ಒಂದೆರಡು ಕಡೆ ಸೋಮವಾರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ