ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬದ ಮಾತಿದೆ. ಈ ಕಾಲದಲ್ಲಿ ಹಣಕ್ಕಾಗಿ ಮನುಷ್ಯರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಹಣವಿದ್ದರೆ ಸಮಾಜದಲ್ಲಿ ಘನತೆ, ಗೌರವ ಬರುತ್ತದೆ ಅಂತಾ ಅಡ್ಡದಾರಿ ಹಿಡಿಯುತ್ತಾರೆ. ಕೋಟಿ ಕೋಟಿ ರೂಪಾಯಿ ಗಳಿಸಿಟ್ಟಿರುವ ವ್ಯಕ್ತಿಯು ಒಂದೇ ಒಂದು ರೂಪಾಯಿ ಖರ್ಚು ಮಾಡಲು ಹಿಂದು ಮುಂದು ನೋಡುತ್ತಾರೆ
ಕೆಲವೇ ಕೆಲ ಮಂದಿ ಇದಕ್ಕೆ ತದ್ವಿರುದ್ಧವಾಗಿ ಇರುತ್ತಾರೆ. ಇನ್ನೊಬ್ಬರಿಗೆ ಸಹಾಯ ಮಾಡಲೆಂದೇ ನಾವು ಈ ಭೂಮಿಯಲ್ಲಿ ಜನಿಸಿದ್ದೇವೆ ಎಂದು ತಿಳಿದುಕೊಂಡಿರುತ್ತಾರೆ. ತಮ್ಮ ಸಂಪಾದನೆಯ ಬಹುಪಾಲನ್ನು ನಿರ್ಗತಿಕರಿಗೆ ಅಥವಾ ಕಷ್ಟದಲ್ಲಿದ್ದವರಿಗೆ ಹಂಚುತ್ತಾ, ಇತರರ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಿರುತ್ತಾರೆ. ಇಂದು ನಾವು ಹೇಳ ಹೊರಟಿರುವ ವ್ಯಕ್ತಿಯು ಕೂಡ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.
ಹೆಸರು ಪೂಲಪಾಂಡಿಯನ್. ಇವರಿಗೆ 72 ವಯಸ್ಸು. ತಮಿಳುನಾಡಿನ ತೂತುಕುಡಿಯ ನಿವಾಸಿ. ಭಿಕ್ಷೆ ಬೇಡುವುದೇ ಇವರ ಕಾಯಕ. ಆದರೆ, ಭಿಕ್ಷೆಯ ಹಣವನ್ನು ದಾನ ಮಾಡುವುದೇ ಇವರಿಗೆ ಸಂತೋಷದಾಯಕ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಉದ್ದೇಶಕ್ಕಾಗಿ ಇದುವರೆಗೂ ಇವರು ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬರೋಬ್ಬರಿ 55.60 ಲಕ್ಷ ರೂಪಾಯಿ ಹಣವನ್ನು ದಾನ ಮಾಡಿದ್ದಾರೆ.
ಇತ್ತೀಚೆಗೆ ಅಂದರೆ, ಕಳೆದ ಸೋಮವಾರ ವೆಲ್ಲೂರು ಜಿಲ್ಲಾಧಿಕಾರಿ ಬಳಿ ತೆರಳಿ 10 ಸಾವಿರ ರೂಪಾಯಿ ದಾನ ಮಾಡಿದ್ದು, ಶ್ರೀಲಂಕಾ ತಮಿಳಿಗರ ನೆರವಿಗಾಗಿ ಬಳಸಿಕೊಳ್ಳಿ ಎಂದು ಹೇಳಿದ್ದಾರೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಅಲ್ಲಿನ ತಮಿಳಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರಿಗೆ ಸೂಕ್ತ ನೆರವು ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಭಿಕ್ಷಾಟನೆ ಮೂಲಕ ಸಿಗುವ ಹಣವನ್ನು ಜನರ ಅನುಕೂಲಕ್ಕೆ ಬಳಸುತ್ತೇನೆ. ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ, ಕುರ್ಚಿ ಮತ್ತು ಟೇಬಲ್ ಸೌಲಭ್ಯ ಮಾಡುತ್ತೇನೆ. ಈವರೆಗೂ 55.60 ಲಕ್ಷ ರೂಪಾಯಿ ದಾನ ಮಾಡಿದ್ದೇನೆ ಎಂದು ಹೇಳಿದರು.