Publish Date: Sat, 04 Apr 2026 (15:45 IST)
Updated Date: Sat, 04 Apr 2026 (15:50 IST)
ಸಿಎಸ್‌ಕೆ ವಿರುದ್ಧದ ಆರ್‌ಸಿಬಿ ಪಂದ್ಯಾಟ ನೋಡಲು ಶಾಸಕಗರಿಗೆಷ್ಟು ಕ್ರೇಜ್, ಟಿಕೆಟ್‌ಗಾಗಿ ಪಿಎಗಳನ್ನೇ ಕ್ಯೂ ನಿಲ್ಲಿಸಿದ ಶಾಸಕರು
ಬೆಂಗಳೂರು: ಒಂದೇಡೆ ಜನರು ಗ್ಯಾಸ್‌ಗಾಗಿ ರಾತ್ರಿಯಿಡಿ ಸರತಿಯಲ್ಲಿ ನಿಂತು ಪರದಾಡುತ್ತಿದ್ದರೆ, ಇತ್ತ ಶಾಸಕರು ಐಪಿಎಲ್ ಟಿಕೆಟ್‌ಗಾಗಿ ತಮ್ಮ ಪಿಎಗಳನ್ನು ಕ್ಯೂ ನಿಲ್ಲಿಸಿದ್ದಾರೆ.
ಈಚೆಗೆ ಪ್ರತಿ ಶಾಸಕರಿಗೆ 3 ಐಪಿಎಲ್ ಟಿಕೆಟ್‌ಗಳನ್ನು ಘೋಷಿಸಿದ ಬೆನ್ನಲ್ಲೇ ಪಿಎಗಳನ್ನು ಟಿಕೆಟ್ ಪಡೆಯಲು ಶಾಸಕರು ಸರತಿ ಸಾಲಿನಲ್ಲಿ ನಿಲ್ಲಿಸಿದ್ದಾರೆ. ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ಕೊಡುವ ಮಾತುಕತೆ ಸರ್ಕಾರ- ಕೆಎಸ್‌ಸಿಎ ಮಧ್ಯೆ ಆಗಿದೆ.
ನಾಳೆ ಬೆಂಗಳೂರು ಮತ್ತು ಚೆನೈ ಪಂದ್ಯವಿದೆ. ಈ ಪಂದ್ಯದ ಟಿಕೆಟ್‌ಗಾಗಿ ಶಾಸಕರ ಪಿಎಗಳು ಇದೀಗ ಸ್ಪೀಕರ್ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದಾರೆ.
ಸ್ಪೀಕರ್ ಕಚೇರಿಯಲ್ಲಿ ಟಿಕೆಟ್ ಸಿಗುವುದರಿಂದ ಶಾಸಕರ ಸೂಚನೆ ಮೇರೆಗೆ ಕ್ಯೂ ನಿಂತು ಟಿಕೆಟ್ ಪಡೆದಿದ್ದಾರೆ. ಜನರ ಸಮಸ್ಯೆ ಕೇಳದ ಜನಪ್ರತಿನಿಧಿಗಳು ಐಪಿಎಲ್ ಟಿಕೆಟ್‌ಗಾಗಿ ಹೀಗೆ ವರ್ತನೆ ತೋರೋದು ಮಾತ್ರ ವಿಪರ್ಯಾಸವೇ ಸರಿ.