Select Your Language

Notifications

webdunia
webdunia
webdunia
webdunia

ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆಗೆ ಇನ್ನಷ್ಟು ಕಾಲಾವಕಾಶ ಕೊಡಿ: ವಿ.ಸುನೀಲ್‍ಕುಮಾರ್

V Sunil Kumar

Krishnaveni K

ಬೆಂಗಳೂರು , ಮಂಗಳವಾರ, 26 ಆಗಸ್ಟ್ 2025 (15:35 IST)
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಮತ್ತು ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದೆ. ಹಬ್ಬ, ಹರಿದಿನಗಳು ಇರುವ ಕಾರಣ, ಸರಕಾರಿ ರಜೆಗಳು ನಿರಂತರವಾಗಿ ಇರುವ ಕಾರಣಕ್ಕೆ ಈ 7 ದಿನಗಳ ಕಾಲಾವಕಾಶವನ್ನು ಇನ್ನಷ್ಟು ವಿಸ್ತರಿಸಲು ಮನವಿ ಮಾಡಿದ್ದೇವೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಕ್ಷೇಪಣೆ ಸಲ್ಲಿಸಲು ಇನ್ನೂ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ಕೊಡಲು ಬಿಜೆಪಿ ಕಡೆಯಿಂದ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
 
ಇಂದು ಪ್ರಮುಖರ ಸಭೆ ನಡೆಸಲಾಗಿದೆ. 1,400 ಜಾತಿ ಪಟ್ಟಿ ಅವಲೋಕಿಸಿದಾಗ ಯಥಾಪ್ರಕಾರ ಮುಸ್ಲಿಮರು ಮತ್ತು ಮುಸ್ಲಿಂ ಉಪ ಜಾತಿಗಳನ್ನು ಪಟ್ಟಿಯಲ್ಲಿ ಕೈಬಿಟ್ಟಿದ್ದಾರೆ. ಹಿಂದೆ ಜಯಪ್ರಕಾಶ್ ಹೆಗ್ಡೆಯವರು 90 ಜಾತಿಗಳು ಮುಸಲ್ಮಾನರಲ್ಲಿ ಇವೆ ಎಂದು ಪ್ರಕಟಿಸಿದ್ದರು. ಆಯೋಗವು 1,400 ಜಾತಿಗಳ ಪಟ್ಟಿ ಮಾಡುವಾಗ ಇದನ್ನು ಯಾಕೆ ಬಿಟ್ಟಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.
 
ಜಾತಿಯ ಪಟ್ಟಿ, ಮಾನದಂಡ ಬಳಕೆ ಮೊದಲಾದ ಹಲವು ರೀತಿಯ ಗೊಂದಲಗಳಿವೆ. ಅವು ಅಧ್ಯಕ್ಷರ ಪತ್ರಿಕಾ ಹೇಳಿಕೆ ಮೂಲಕ ಗೊತ್ತಾಗಿದೆ. ಮುಂದಿನ ವಾರ ಬಿಜೆಪಿ ನಿಯೋಗವು ಆಯೋಗಕ್ಕೆ ಭೇಟಿ ಕೊಡಲಿದೆ. ನಮಗಿರುವ ಅನುಮಾನಗಳು, ಸಮೀಕ್ಷೆ ಯಾವ ರೀತಿ ನಡೆಯಬೇಕೆಂಬ ಕುರಿತು ವಿವರಗಳನ್ನು ತಿಳಿಸಲು ಇಂದಿನ ಸಭೆಯು ತೀರ್ಮಾನ ಮಾಡಿದೆ ಎಂದು ತಿಳಿಸಿದರು.
 
ಧರ್ಮಸ್ಥಳ ವಿಷಯದಲ್ಲಿ ಹತ್ತಾರು ಮುಸುಕುಧಾರಿಗಳು
ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳಕ್ಕೆ ಸಂಬಂಧಿಸಿ ಎಸ್‍ಐಟಿ ತನಿಖೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ತನಿಖೆ ಮತ್ತು ತನಿಖೆ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರದ ಅವಹೇಳನ ಮಾಡಬಾರದು. ಅಪಪ್ರಚಾರ ಮಾಡಬಾರದು ಎಂಬುದು ಬಿಜೆಪಿ ನಿಲುವು. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ನಾವು ಹೇಳಿದ್ದು, ಉಪ ಮುಖ್ಯಮಂತ್ರಿಗಳೂ ಇದನ್ನು ಒಪ್ಪಿಕೊಂಡಿದ್ದಾರೆ. ಇದರ ಹಿಂದಿನ ಶಕ್ತಿಗಳನ್ನು ಎಸ್‍ಐಟಿ ಪತ್ತೆ ಹಚ್ಚುವ ವಿಶ್ವಾಸ ನಮಗಿದೆ ಎಂದು ನುಡಿದರು.
 
ಇದರಲ್ಲಿ ಒಬ್ಬ ಮುಸುಕುಧಾರಿಯಲ್ಲ; ಹತ್ತಾರು ಜನರು ಮುಸುಕುಧಾರಿಗಳಾಗಿ ಕೆಲಸ ಮಾಡಿದ್ದಾರೆಂದು ನಾನು ಸದನದಲ್ಲೂ ಹೇಳಿದ್ದೆ ಎಂದು ತಿಳಿಸಿದರು. ಸುಳ್ಳು ಸುದ್ದಿ ಹರಡಿಸಿದವರು ಯಾರು? ಪಿತೂರಿ ಮಾಡಿದ್ದು ಯಾರು? – ಇವೆಲ್ಲವೂ ತನಿಖೆಯಿಂದ ಗೊತ್ತಾಗಬೇಕಿದೆ. ಆದಷ್ಟು ಬೇಗ, ತನಿಖೆಯಿಂದ ಇವೆಲ್ಲ ಹೊರಬರಲಿ ಎಂದು ಆಗ್ರಹಿಸಿದರು.
 
ಇಸ್ಲಾಂನಲ್ಲಿ ವಿಗ್ರಹ ಪೂಜೆಗೆ ಅವಕಾಶ ಇದ್ದರೆ
ನಾಡಹಬ್ಬ ದಸರಾವನ್ನು ನಾಡಿನ ಜನರು ಅತ್ಯಂತ ಶ್ರದ್ಧಾಭಕ್ತಿಯಿಂದ ಗೌರವಿಸುವ- ಪೂಜಿಸುವ ಒಂದು ಸಂಸ್ಕøತಿ. ಇದರ ಉದ್ಘಾಟನೆ ಹೇಗಾಗಬೇಕೆಂದು ಒಂದು ಜವಾಬ್ದಾರಿಯುತ ಸರಕಾರ ಇವತ್ತು ತೀರ್ಮಾನ ಮಾಡಬೇಕು. ಇಸ್ಲಾಂನಲ್ಲಿ ವಿಗ್ರಹ ಪೂಜೆಗೆ ಅವಕಾಶ ಇದ್ದರೆ, ಅದನ್ನು ಬಾನು ಮುಷ್ತಾಕ್ ಅವರು ಒಪ್ಪಿಕೊಳ್ಳುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು.
 
ಒಂದೆಡೆ ವಿಗ್ರಹಾರಾಧನೆಗೆ ಅವರು ಮನ್ನಣೆ ಕೊಡುವುದಿಲ್ಲ; ಮಹಮ್ಮದ್ ಘೋರಿಯಿಂದ ಪಿಎಫ್‍ಐ ತನಕ ವಿಗ್ರಹಾರಾಧನೆ ವಿರೋಧಿಸಿ ಎಷ್ಟು ದೇವಸ್ಥಾನಗಳಲ್ಲಿ ಹಿಂದೂ ವಿಗ್ರಹ ನಾಶ ಮಾಡಿದ್ದನ್ನು ಇತಿಹಾಸ ಹೇಳುತ್ತದೆ. ಈ ವಿವಾದವನ್ನು ಸರಕಾರವೇ ಮೈಮೇಲೆ ಎಳೆದುಕೊಂಡಿದೆ. ಪ್ರತಿ ಬಾರಿ ಹಿಂದೂಗಳ ಅವಮಾನವೇ ಸಿದ್ದರಾಮಯ್ಯನವರ ಉದ್ದೇಶ ಎಂದು ಆಕ್ಷೇಪಿಸಿದರು. ಧರ್ಮಸ್ಥಳ ಪ್ರಕರಣದಲ್ಲೂ ಸರಕಾರದ ಸಹಾನುಭೂತಿ ಇಲ್ಲದೆ ಇಷ್ಟೆಲ್ಲ ಆಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.
 
ಒತ್ತಡ ಬಿತ್ತೆಂಬ ಕಾರಣಕ್ಕೆ ಕ್ಷಮೆ ಕೇಳಿದ್ದಾರೆ
ಡಿ.ಕೆ.ಶಿವಕುಮಾರ್ ಅವರು ಸಂಘದ ಪ್ರಾರ್ಥನೆ ಹೇಳಿದ್ದು, ಇನ್ಯಾರದೋ ಒತ್ತಡ ಬಿತ್ತೆಂಬ ಕಾರಣಕ್ಕೆ ಕ್ಷಮೆ ಕೇಳಿದ್ದು, ಅತ್ಯಂತ ದುರಂತದ ಸಂಗತಿ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ನೀವು ಗಾಂಧಿ ಕುಟುಂಬಕ್ಕೆ ನಿಷ್ಠರಾಗಬೇಕೆಂದಲ್ಲ; ಸಂಘದ ಪ್ರಾರ್ಥನೆ ದೇಶಭಕ್ತಿಯನ್ನು ಹೇಳಿಕೊಡುತ್ತದೆ. ನೀವು ಮೊದಲು ದೇಶಭಕ್ತರಾಗಿ ಎಂದು ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಹೇಳಿದ್ದಕ್ಕೆ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕಿತ್ತು. ಜಾರಕಿಹೊಳಿ ಅವರು ಹಿಂದೂ ಶಬ್ದ ಅಶ್ಲೀಲ ಎಂದುದಕ್ಕೆ ಕ್ಷಮೆ ಕೇಳಬೇಕಿತ್ತು. ಆರೆಸ್ಸೆಸ್ ಪ್ರಾರ್ಥನೆ ಹೇಳಿದ್ದಕ್ಕೆ ಕ್ಷಮೆ ಕೇಳಬೇಕಿರಲಿಲ್ಲ ಎಂದು ತಿಳಿಸಿದರು.
 
ಮನವಿಯಲ್ಲಿ ಏನಿದೆ?: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ದಿನಾಂಕ 22.08.2025 ರಂದು ಹಿಂದುಳಿದ ಆಯೋಗದ ಜಾತಿ ಮತ್ತು ಉಪಜಾತಿಗಳ ಪಟ್ಟಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಣೆ ಮಾಡಿ, ಈ ಪಟ್ಟಿಯಲ್ಲಿ ಯಾವುದೇ ಜಾತಿಗಳು, ಉಪಜಾತಿಗಳು ಬಿಟ್ಟು ಹೋಗಿದ್ದರೆ ಅಥವಾ ತಪ್ಪಾಗಿ ನಮೂದಿಸಿದ್ದರೆ, ಈ ಇತ್ಯಾದಿ ಅಂಶಗಳ ಬಗ್ಗೆ ಸಲಹೆ ಸೂಚನೆ ಇದ್ದಲ್ಲಿ, ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ಪ್ರಕಟಣೆಯಾದ ಏಳು ದಿನಗಳ ಒಳಗೆ ತಮ್ಮ ಅಹವಾಲುಗಳನ್ನು ಆಯೋಗಕ್ಕೆ ತಲುಪಿಸಲು ತಿಳಿಸಿರುತ್ತೀರಿ. ಈ ಸಂದರ್ಭದಲ್ಲಿ ಸಾಲುಸಾಲು ಹಬ್ಬಗಳು ಬಂದಿರುವ ಕಾರಣ ಹಾಗೂ ರಜೆಗಳು ಇರುವ ಕಾರಣ ಅಭಿಪ್ರಾಯಗಳನ್ನು ತಿಳಿಸಲು ಕಷ್ಟವಾಗಿರುತ್ತದೆ ಎಂದು ಪತ್ರವು ತಿಳಿಸಿದೆ.

ಆದ್ದರಿಂದ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶವನ್ನು ವಿಸ್ತರಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ತಿಳಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಾಂಬೆಗೆ ನಮಿಸಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕೇ: ಆರ್ ಅಶೋಕ್