Publish Date: Wed, 13 Mar 2024 (16:26 IST)
Updated Date: Wed, 13 Mar 2024 (16:29 IST)
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ವಿರುದ್ಧ ಕಣಕ್ಕಿಳಿಯಲಿರುವ ಡಾ ಸಿಎನ್ ಮಂಜುನಾಥ್ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಹರಕೆ ಕುರಿ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಅನ್ಸಾರಿ ಲೇವಡಿ ಮಾಡಿದ್ದಾರೆ.
ಡಿಕೆ ಸುರೇಶ್ ಜೊತೆ ಸ್ಪರ್ಧಿಸಲು ನಿಮ್ಮಲ್ಲಿ ಯಾರಿಗೂ ಗಂಡಸ್ತನವಿಲ್ವಾ? ಇಲ್ಲಿನ ಉಸ್ತುವಾರಿ ಸಚಿವರು ಎಂದು ಒಬ್ಬರಿದ್ದರಲ್ಲಾ ಅವರನ್ನು ನಿಲ್ಲಿಸಬಹುದಿತ್ತಲ್ವಾ ಎಂದು ಡಾ. ಅಶ್ವತ್ಥ್ ನಾರಾಯಣ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ನಾಳೆ ಮಂಜುನಾಥ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಇಕ್ಬಾಲ್ ಅನ್ಸಾರಿ ವಾಗ್ದಾಳಿ ನಡೆಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಿಎನ್ ಮಂಜುನಾಥ್ ಅವರನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿ ಡಿಕೆ ಸುರೇಶ್ ವಿರುದ್ಧ ಮಂಜುನಾಥ್ ಸ್ಪರ್ಧೆ ನಡೆಸುವುದು ಬಹುತೇಕ ಖಚಿತವಾಗಿದೆ.
ಡಾ. ಮಂಜುನಾಥ್ ಅಮಾಯಕರು. ಪಾಪದ ಅಮಾಯಕರನ್ನು ತಂದು ಸ್ಪರ್ಧೆಗಿಳಿಸುತ್ತಿದ್ದಾರೆ. ಡಿಕೆ ಸುರೇಶ್ ವಿರುದ್ಧ ಮಂಜುನಾತ್ ರನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ಯಾಕೆ ನಿಮ್ಮಲ್ಲಿ ಯಾರಿಗೂ ತಾಕತ್ತಿಲ್ವಾ ಎಂದು ಇಕ್ಬಾಲ್ ಅನ್ಸಾರಿ ವಾಗ್ದಾಳಿ ನಡೆಸಿದ್ದಾರೆ.