Publish Date: Sun, 03 May 2026 (16:35 IST)
Updated Date: Sun, 03 May 2026 (16:37 IST)
ಕೊಪ್ಪಳ: ಈಗೀನ ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಬದಲಾವಣೆ ಮಾಡುವುದಿಲ್ಲ. ಒಂದು ವೇಳೆ ಮಾಡಲು ಪಕ್ಷ ನಿರ್ಧರಿಸಿದ್ದಲ್ಲಿ, ಕಡ್ಡಾಯವಾಗಿ ಶಾಸಕರ ಅಭಿಪ್ರಯಾವನ್ನು ಕೇಳಬೇಕು. ಅವರಿಗೆ ಪರ್ಯಾಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿ.ಎಂ. ಮಾಡಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಇಂದು ತಾಲ್ಲೂಕಿನ ಕೋಳೂರು–ಕಾಟ್ರಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ವಾರ ಖರ್ಗೆ ಅವರನ್ನು ಭೇಟಿಯಾಗಿ ರಾಜಕೀಯ ವಿಚಾರಗಳನ್ನು ಚರ್ಚೆ ನಡೆಸಿದ್ದೇನೆ.
ಇನ್ನೂ ರಾಜ್ಯದಲ್ಲಿ ಅನಗತ್ಯವಾಗಿ ಸೃಷ್ಟಿಯಾಗುತ್ತಿರುವ ಗೊಂದಲಗಳಿಗೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದ್ದೇನೆ. ಸಚಿವ ಸಂಪುಟ ಪುನರ್ ರಚನೆ ಮಾಡಿ 25 ಜನ ಸಚಿವರನ್ನು ತೆಗೆದು ಹೊಸಬರು ಹಾಗೂ ಹಿರಿಯರಿಗೆ ಅವಕಾಶ ಕೊಡುವಂತೆ ಕೇಳಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.
ನಾನು ಡಿಕೆ ಶಿವಕುಮಾರ್ ಅವರು ಸಿಎಂ ಆಗಬಾರದೆಂದು ಎಂದು ನಾನು ಹೇಳಿಲ್ಲ. ನಾನು ಯಾರ ಬೆಂಬಲಿಗನೂ ಅಲ್ಲ. ಕಾಂಗ್ರೆಸ್ ಪಕ್ಷದ ಬೆಂಬಲಿಗ. ಸಿದ್ದರಾಮಯ್ಯನವರ ಆಡಳಿತ ವೈಖರಿ ಚೆನ್ನಾಗಿದ್ದು, ಅವರ ಬಗ್ಗೆ ಪ್ರೀತಿಯಿದೆ. ಆದ್ದರಿಂದ ಅವರ ಪರವಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಮಗು ಅಳದಿದ್ದರೆ ತಾಯಿಯೆ ಹಾಲು ಕೊಡುವುದಿಲ್ಲ; ಇನ್ನು ಸಚಿವ ಸ್ಥಾನವನ್ನು ಖರ್ಗೆ ಅವರ ಬಳಿ ಕೇಳದಿದ್ದರೂ ಹೇಗೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ನಿಜವಾದ ತಾಯಿ ಖಂಡಿತವಾಗಿಯೂ ಹಾಲು ಕೊಡುತ್ತಾಳೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.