Publish Date: Fri, 10 Jan 2020 (10:49 IST)
Updated Date: Fri, 10 Jan 2020 (10:50 IST)
ಬೆಂಗಳೂರು: ಪಕ್ಕೆಲುಬು ಎಂದು ಹೇಳಲು ಪರದಾಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಶಿಕ್ಷಕನ ಮೇಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ ಆಗಿದ್ದಾರೆ.
ಈ ಶಿಕ್ಷಕ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಯಾವುದೋ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗೆ ಪಕ್ಕೆಲುಬು ಎಂಬ ಪದ ಹೇಳಿಕೊಡುತ್ತಿರುವುದು ಮತ್ತು ಆತ ಅದನ್ನು ಹೇಳಲು ಪರದಾಡುವುದನ್ನು ಗೇಲಿ ಮಾಡಿ ವಿಡಿಯೋ ಹರಿಯಬಿಟ್ಟಿದ್ದರು.
ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ತಪ್ಪನ್ನು ತಿದ್ದಬೇಕೇ ಹೊರತು ಈ ರೀತಿ ಅಪಹಾಸ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಹೇಯ ಕೃತ್ಯ. ಈ ಶಿಕ್ಷಕ, ಶಾಲೆ ಮತ್ತು ಆ ಶಾಲೆಯ ಮುಖ್ಯೋಪಾಧ್ಯಾಯರು ಯಾರು ಎಂದು ತಿಳಿಯಲು ಸೈಬರ್ ಕ್ರೈಂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆ ಶಿಕ್ಷಕನ ಯಾರೆಂದು ಗೊತ್ತಾಗುತ್ತಿದ್ದಂತೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸುತ್ತೋಲೆ ಹೊರಡಿಸಿದ್ದಾರೆ.