ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಸರಿಯಾಗಿ ಕ್ರೆಡಿಟ್ ಆಗುವುದಿಲ್ಲ ಯಾಕೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಅವರು ಇಂದು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ವತಿಯಿಂದ ಶ್ರೀ ಕಂಠೀರವ ಒಳಾoಗಣ ಕ್ರೀಡಾಂಗಣ ದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಈ ವೇಳೆ ಮಾಧ್ಯಗಳು ಯಾಕೆ ಗೃಹಲಕ್ಷ್ಮಿ ಹಣ ಆಯಾ ತಿಂಗಳು ಸರಿಯಾಗಿ ಕ್ರೆಡಿಟ್ ಆಗಲ್ಲ ಎಂದು ಸಚಿವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವೆ, ನಿಮಗೆಲ್ಲರಿಗೂ ಐದನೇ ತಾರೀಖು ಸಂಬಳ ಎಂದರೆ ಐದನೇ ತಾರೀಖೇ ಥಟ್ಟಂತ ಆಗಿಬಿಡುತ್ತಾ? ಹಾಗೇ ಇದು ಎಂದು ಸಮಜಾಯಿಷಿ ಕೊಡಲು ಯತ್ನಿಸಿದ್ದಾರೆ.
ಆಗ ಮಾಧ್ಯಮ ಪ್ರತಿನಿಧಿಗಳು ನಮಗೆ ಐದನೇ ತಾರೀಖು ಎಂದರೆ ಐದನೇ ತಾರೀಖೇ ಆಗುತ್ತದೆ ಎಂದಿದ್ದಾರೆ. ಇದಕ್ಕೆ ಸಚಿವರು ಸರ್ಕಾರೀ ನೌಕರರಿಗೆ ಆಗಲ್ಲ. ಕೆಲವೊಮ್ಮೆ ಸರ್ಕಾರೀ ನೌಕರರಿಗೆ ಎರಡು ತಿಂಗಳ ವೇತನ ಬಾಕಿಯಿದ್ದು ಬಳಿಕ ಒಟ್ಟಿಗೇ ಕೊಡುವುದೂ ಇದೆ ಎಂದಿದ್ದಾರೆ. ಆದರೆ ಈ ವೇಳೆ ಮಾಧ್ಯಮಗಳು ಲಕ್ಷ್ಮೀ ಹೆಬ್ಬಾಳ್ಕರ್ ಕಾಲೆಳೆದಿದ್ದು ಹಾಗೂ ಆಗುತ್ತದಾ ಮೇಡಂ ಎಂದು ಪ್ರಶ್ನೆ ಮಾಡಿವೆ. ಆಗ ಸಚಿವರು ಈ ತಿಂಗಳು ಕೆಲಸ ಮಾಡಿದರೆ ನಿಮಗೆ ಮುಂದಿನ ತಿಂಗಳು ಸಂಬಳ ಆಗೋದಲ್ವಾ? ಅದೇ ರೀತಿ ಗೃಹಲಕ್ಷ್ಮಿ ಹಣವನ್ನು ಈ ತಿಂಗಳಿನದ್ದು ಮುಂದಿನ ತಿಂಗಳು ಹಾಕ್ತೀವೆ ಎಂದು ಸಮಜಾಯಿಷಿ ನೀಡಿದ್ದಾರೆ.