ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಮಸೂದೆ ಕುರಿತಾದ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರಸ್ಕರಿಸಿದ್ದಾರೆ.
ಈ ಬಗ್ಗೆ ಸಿಎಂ ಕಚೇರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಹಲವು ಲೋಪದೋಷಗಳನ್ನ ಗುರುತಿಸಿ ಸುಗ್ರೀವಾಜ್ಞೆಗೆ ಅಂಕಿತ ಹಾಕದೇ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲೇ ಮಸೂದೆ ಮಂಡಿಸಿ ಚರ್ಚೆ ಮಾಡಿ ಕಳುಹಿಸಿ ಎಂದು ಸುಗ್ರೀವಾಜ್ಞೆ ತಿರಸ್ಕರಿಸಿದ್ದಾರೆ. ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದ ಸರ್ಕಾರ ಈಗ ಸುಗ್ರೀವಾಜ್ಞೆ ಕರಡು ಬಿಲ್ ಪರಿಷ್ಕರಣೆ ಮಾಡಿ ಮಸೂದೆ ತರಬೇಕಿದೆ.
ಈ ಮೊದಲು ಕೆಲ ದೋಷಗಳನ್ನು ಸರಿಪಡಿಸುವಂತೆ ಸ್ಪಷ್ಟೀಕರಣಕ್ಕೆ ರಾಜ್ಯಪಾಲರು ಸರ್ಕಾರಕ್ಕೆ ಕಳುಹಿಸಿದರು. ಆದಾದ ಬಳಿಕ ಮತ್ತೆ ಸುಗ್ರೀವಾಜ್ಞೆ ಕಳುಹಿಸಲಾಗಿತ್ತು. ಅಲ್ಲದೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಎಂ ಸಿಎಸ್ ರಾಜ್ಯಪಾಲರನ್ನ ಭೇಟಿ ಮಾಡಿ ವಿವರಣೆ ನೀಡಿದ್ದಾರೆ. ಆದ್ರೆ ಆರ್‌ಬಿಐ ನಿಯಮಾವಳಿಗಳಿಗೆ ಅಡ್ಡಿ, ಸಾಲ ಕೊಟ್ಟವರ ರಕ್ಷಣೆ ಬಗ್ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು, ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
ಮಸೂದೆಯಲ್ಲಿ ಸಾಲ ಪಡೆದವರಿಗೆ ರಕ್ಷಣೆ ಇದೆ. ಆದರೆ ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಇಲ್ಲ. ಅಲ್ಲದೇ ಆರ್‌ಬಿಐ ನಿಯಮಗಳು, ಪೊಲೀಸ್ ನಿಯಮಗಳಲ್ಲಿ ವ್ಯತಿರಿಕ್ತ ಪರಿಣಾಮಗಳಿವೆ. ಸಾಲ ಪಡೆದವರಿಗೆ ರಕ್ಷಣೆ ಇರುವಂತೆ, ಸಾಲ ಕೊಡುವವರಿಗೂ ರಕ್ಷಣೆ ಇರಬೇಕು. ವಿಧಾನ ಮಂಡಲ ಅಧಿವೇಶನ ಹತ್ತಿರದಲ್ಲೇ ಇದೆ. ಅಲ್ಲೇ ಮಸೂದೆ ಮಂಡನೆ ಮಾಡಿ, ಚರ್ಚೆ ಬಳಿಕ ಅಂಗೀಕಾರ ಮಾಡಬಹುದು ಎಂದು ರಾಜ್ಯಪಾಲರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು 5 ಲಕ್ಷ ದಂಡ ಹೇಗೆ ಹಾಕುತ್ತೀರಾ? ಸಾಲ ಪಡೆಯುವವನ ಬಳಿ ಏನೂ ದಾಖಲೆ ತಗೆದುಕೊಳ್ಳಬಾರದು ಎಂದು ಹೇಳಿದ್ದೀರಿ. ಆದರೆ, ಇದು ಸರ್ಕಾರಿ ಸಂಸ್ಥೆಗಳ ಸಾಲದ ವೇಳೆ ಅನುಸರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಶಿಕ್ಷೆ ಪ್ರಮಾಣ 10 ವರ್ಷ ವಿಧಿಸಲಾಗಿದೆ. ಶಿಕ್ಷೆ ಪ್ರಮಾಣದಲ್ಲಿ ಯಾವುದೇ ಲಾಜಿಕ್ ಇಲ್ಲ.
ಪ್ರಾಮಾಣಿಕವಾಗಿ ಸಾಲ ಕೊಟ್ಟವರಿಗೂ, ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರಿಗೂ ಸಮಸ್ಯೆ ಆಗಲಿದೆ. ಈಗ ಇರುವ ಕಾನೂನುಗಳಲ್ಲೇ ಪೊಲೀಸರು ಸರಿಯಾದ ಕ್ರಮಕೈಗೊಳ್ತಿಲ್ಲ. ಪೊಲೀಸರು ಸರಿಯಾದ ಕ್ರಮಕೈಗೊಳ್ಳದೇ ಇರೋದಕ್ಕೆ ಮತ್ತೊಂದು ಕಾನೂನಿನ ಅಗತ್ಯತೆ ಕಾಣ್ತಿಲ್ಲ. ಆದ್ದರಿಂದ ಬಜೆಟ್ ಅಧಿವೇಶನದ ಹತ್ತಿರವಾಗ್ತಿರುವಾಗ ಸದನದಲ್ಲಿ ಮಸೂದೆ ಮಂಡನೆ ಮಾಡಿ ಸಾಧಕಬಾಧಕ ಚರ್ಚಿಸಿ ಎಂದು ತಿಳಿವಳಿಕೆ ನೀಡಿದ್ದಾರೆ.