ಬೆಂಗಳೂರು: ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕೋಳಿ ಅಂಕ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನ ಹೆಸರಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಶನಿವಾರ ಈ ಕುರಿತು ತಮ್ಮ ಎಕ್ಸ್ ಖಾತೆಯಿಂದ ಪ್ರತಿಕ್ರಿಯಿಸಿರುವ ಅವರು, ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಕೋಳಿ ಅಂಕವನ್ನು ಪೊಲೀಸ್ ಬಲದ ಬಿ ಕೆ ಹರಿಪ್ರಸಾದ್ ತಡೆಯಲು ಹೊರಟಿದ್ದಾರೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ.
ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಕೋಳಿ ಅಂಕ ನಡೆಯುತ್ತಿದೆಯೋ ಇಲ್ಲವೋ ಎಂಬ ವಿಚಾರವೇ ನನ್ನ ಗಮನಕ್ಕ ಬಂದಿಲ್ಲ. ಕೋಳಿ ಅಂಕದ ಸಂಬಂಧ ಯಾವುದೇ ವ್ಯಕ್ತಿಗಳಾಗಲೀ, ಸಂಘಟನೆಯವರಾಗಲೀ, ಇಲಾಖೆಯವರಾಗಲೀ ನನ್ನ ಜೊತೆ ಮಾತುಕತೆಯನ್ನೇ ಮಾಡಿರುವುದಿಲ್ಲ. ಹಾಗಾಗಿ ಅದನ್ನು ತಡೆಯುವ ಅಥವಾ ಬೆಂಬಲಿಸುವ ಪ್ರಶ್ನೆಯೇ ಇರುವುದಿಲ್ಲ.
ನಾನು ಶ್ರೀ ನಾರಾಯಣ ಗುರುಗಳು ಬೋಧಿಸಿದ ತತ್ವಾದರ್ಶಗಳಂತೆ ಬದುಕುವವನು. ಶ್ರೀನಾರಾಯಣ ಗುರು- ಗಾಂಧಿ-ಅಂಬೇಡ್ಕರ್ ಹಾದಿಯಲ್ಲಿ ನಾನು ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಇಂತಹ ಸುಳ್ಳು ಅಪಪ್ರಚಾರಗಳಿಗೆ ನಾನು ಹೆದರುವುದಿಲ್ಲ. ನಾನು ಕರಾವಳಿಯ (ಮೂಢನಂಬಿಕೆ ರಹಿತ, ಜೂಜು ರಹಿತ, ಅಸ್ಪೃಶ್ಯತೆ, ಅಸಮಾನತೆ ರಹಿತ) ಎಲ್ಲಾ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬೆಂಬಲಿಸುತ್ತಲೇ ಬಂದಿದ್ದೇನೆ. ಸೌಹಾರ್ದತೆಯ ಸಂದೇಶ ಸಾರುವ ಆಚರಣೆಗಳನ್ನು ಬೆಂಬಲಿಸುತ್ತಲೆ ಇರುತ್ತೇನೆ ಎಂದು ಸ್ಪಷ್ಟಪಡಿಸುತ್ತೇನೆ...