ಮಹದಾಯಿ ವಿವಾದ ಕುರಿತು ಮೂರು ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಕ್ಟೋಬರ್ 19 ರಂದು ಸಂಜೆ 4 ಗಂಟೆಗೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆಯಲ್ಲಿ ವಿವಾದ ಅತ್ಯರ್ಥಗೊಳಿಸುವಂತೆ ನಾವು ಒತ್ತಾಯಿಸಿದ್ದೇವು. ಇದೀಗ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿದ್ದು, ನಾವು ಮುಕ್ತವಾಗಿ ಸಭೆಯಲ್ಲಿ ಭಾಗವಹಿಸುತ್ತೇವೆ ಎಂದರು.
ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಮೂರು ರಾಜ್ಯಗಳ ಸಿಎಂ ಸಭೆ ಕರೆದಿದ್ದು ಉತ್ತಮ ಬೆಳವಣಿಗೆಯಾಗಿದ್ದು, ಮಹದಾಯಿ ವಿವಾದದ ಚೆಂಡು ಮತ್ತೆ ಕೇಂದ್ರದ ಬಳಿಯೇ ಹೋಗಲಿದೆ. ರಾಷ್ಟ್ರೀಯ ಜನ ನೀತಿ ಜಾರಿಯಾಗುವವರೆಗೂ ಜಲ ವ್ಯಾಜ್ಯ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ವಿವಾದ.....
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರದ ತಜ್ಞರ ತಂಡ ರಾಜ್ಯಕ್ಕೆ ಆಗಮಿಸಿ ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ಕುರಿತು ಅಧ್ಯಯನ ಮಾಡಿದೆ. ಅಧ್ಯಯನದ ಬಳಿಕ ರಾಜ್ಯದಲ್ಲಿನ ನೀರಿನ ಅಭಾವದ ಕುರಿತು ಕೇಂದ್ರದ ತಂಡಕ್ಕೆ ಮನವರಿಕೆಯಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.