ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶಾನ್ಯ ವಿಭಾಗದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಈಸ್ಟ್ ವೆಸ್ಟ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಬಸವೇಶ್ವರ ನಗರದ ನಿವಾಸಿ ರಾಘವೇಂದ್ರ ಮತ್ತು ಉಲ್ಲಾಳ ನಗರ ನಿವಾಸಿ ಹೊಯ್ಸಳ ಬಂಧಿತ ಆರೋಪಿಗಳು ಎಂ.ಟೆಕ್ ವಿದ್ಯಾರ್ಥಿಗಳಾಗಿದ್ದಾರೆ.
ಈ ಇಬ್ಬರು ಆರೋಪಿಗಳು ತಮ್ಮ ಕಾಲೇಜಿನ ಪ್ರಾಧ್ಯಾಪಕರು ಕಿರುಕುಳ ಕೊಡುತ್ತಿದ್ದಾರೆ ಎಂಬ ಕಾರಣಕ್ಕೆ ಕುತಂತ್ರ ಮಾಡಿ ಅವರನ್ನು ಪೊಲೀಸರ ಕೈಗೆ ಸಿಕ್ಕಿಸಲು ತಮ್ಮ ಪ್ರಾಧ್ಯಾಪಕರ ಹೆಸರಿನಲ್ಲಿ ಇ-ಮೇಲ್ ಸಂದೇಶ ರವಾನೆ ಮಾಡಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಬಾಂಬ್ ಹಾಕಿದ್ದರು.
ಬಂಧಿತ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರಾದ ಪ್ರಸನ್ನ ರಾಜು, ಧನರಾಜ್ ಮತ್ತು ಚಂದನ್ ರಾಜ್ ಅವರ ಪೋಟೋಗಳನ್ನು ಇ-ಮೇಲ್ ಮೂಲಕ ವಿಮಾನ ನಿಲ್ದಾಣಕ್ಕೆ ಕಳುಹಿಸಿ, ಈ ವ್ಯಕ್ತಿಗಳು ದಾವೂದ್ ಇಬ್ರಾಹಿಂ ಆಪ್ತರು, ಇವರುಗಳ ಮೂಲಕ 10 ದಶಲಕ್ಷ ಡಾಲರ್ ನೀಡಬೇಕು. ಇಲ್ಲವಾದಲ್ಲಿ ವಿಮಾನ ಅಪಹರಣ ಮತ್ತು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದರು.