Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಪತ್ನಿಗೆ ಸೈಟು ಬಂದಿದ್ದು ಹೇಗೆ ವಿವರಿಸಿದ ಆಪ್ತ ಎಂ ಲಕ್ಷ್ಮಣ್

Siddaramaiah

Krishnaveni K

ಬೆಂಗಳೂರು , ಗುರುವಾರ, 4 ಜುಲೈ 2024 (14:54 IST)
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿಗದಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ ನಾಯಕರಾದ ಆರ್ ಅಶೋಕ್ ಹಾಗೂ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಮ್ಮ ಅವರ ಹೆಸರನ್ನು ಮಾಧ್ಯಮಗಳ ಮುಂದೆ ತಂದು ತೇಜೋವಧೆ ಮಾಡುತ್ತಿದ್ದಾರೆ. ಅವರ ಸುಳ್ಳು ಆರೋಪಗಳಿಗೆ ಸ್ಪಷ್ಟನೆ ನೀಡುತ್ತಿದ್ದೇನೆ.
 
ಸರ್ವೇ ಸಂಖ್ಯೆ 464 ಕೆಸರೆ ಗ್ರಾಮದಲ್ಲಿ ಲೇಔಟ್ ಮಾಡಿ ನಿವೇಶನ ಹಂಚಿ ಜನ ಮನೆ ನಿರ್ಮಿಸಿ ವಾಸ ಮಾಡುತ್ತಿದ್ದಾರೆ. 31-10-1992ರಲ್ಲಿ ಈ ಗ್ರಾಮದಲ್ಲಿ 3 ಎಕರೆ 16 ಗುಂಟೆ ಜಾಗದ ಮಾಲೀಕರು ಜವರಯ್ಯ. ಇವರ ಜಮೀನನ್ನು ಮೈಸೂರು ನಗರಾಭಿದ್ಧಿ ಪ್ರಾಧಿಕಾರ ನೋಟಿಫೈ ಮಾಡಿ ವಶಪಡಿಸಿಕೊಳ್ಳುತ್ತಾರೆ. 18-05-1998ರಲ್ಲಿ ಈ ಜಮೀನನ್ನು ಡಿನೋಟಿಫಿಕೇಷನ್ ಆದಾಗ ಈ ಜಾಗ ಜವರಯ್ಯ ಅವರ ಹೆಸರಿನಲ್ಲೇ ಇರುತ್ತದೆ. 
 
ನಂತರ 2005ರಲ್ಲಿ ಬಿ.ಎಂ ಮಲ್ಲಿಕಾರ್ಜುನಸ್ವಾಮಿ ಎಂಬುವವರು ಈ ಜಾಗವನ್ನು ಖರೀದಿ ಮಾಡುತ್ತಾರೆ. ಮಲ್ಲಿಕಾರ್ಜುನ ಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಾಮೈದ. ಅಂದರೆ ಧರ್ಮಪತ್ನಿಯ ಅಣ್ಣ. ನಂತರ 3ಎಕರೆ 16 ಗುಂಟೆ ಜಾಗವನ್ನು ದಾನಪತ್ರದ ಮೂಲಕ ಶ್ರೀಮತಿ ಪಾರ್ವತಮ್ಮ ಅವರಿಗೆ ದಾನಪತ್ರದ ಮೂಲಕ 2010ರಲ್ಲಿ ಈ ಜಮೀನನ್ನು ನೀಡುತ್ತಾರೆ. 2025ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮರುನೋಟಿಫೈ ಮಾಡದೆ ಈ ಜಾಗ ಹಾಗೂ ಅದರ ಸುತ್ತಮುತ್ತಲ ಜಾಗಗಳಲ್ಲಿ ನಿವೇಶನ ಮಾಡಿ ಹಂಚಿಕೆ ಮಾಡುತ್ತಾರೆ. 
 
2017ರಲ್ಲಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದು ನಮ್ಮ ಗಮನಕ್ಕೆ ಬಾರದೆ ನಮ್ಮ ಜಮೀನನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದೀರಿ ಎಂದು ದೂರು ದಾಖಲಿಸುತ್ತಾರೆ. ನಂತರ ಅವರು 27 ದೂರು ನೀಡಿದ್ದಾರೆ. ಇವರ 3 ಎಕರೆ 16 ಗುಂಟೆ ಜಾಗದಲ್ಲಿ ಮುಡಾ ಅವರು 59 ನಿವೇಶನಗಳನ್ನು ಮಾಡಿ ಹಂಚಿದ್ದಾರೆ.
 
 30-11-2021ರಲ್ಲಿ ಮುಡಾ ಒಂದು ನಿರ್ಣಯಕ್ಕೆ ಬಂದು ಇವರಿಗೆ ಪ್ರಯಾಯವಾಗಿ ಜಾಗ ನೀಡಲು ತೀರ್ಮಾನಿಸುತ್ತದೆ. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹೊಸ ನೋಟಿಫಿಕೇಶನ್ ಮಾಡಿ ಜಮೀನು ವಶಪಡಿಸಿಕೊಂಡವರಿಗೆ 40:60ರ ಅನುಪಾತದಲ್ಲಿ ಭೂಮಿ ನೀಡಲು ತೀರ್ಮಾನಿಸುತ್ತದೆ. ಅಂದರೆ ರೈತನಿಂದ 10 ಎಕರೆ ಭೂಮಿ ವಶಪಡಿಸಿಕೊಂಡರೆ 60% ರೈತರಿಗೆ 40% ಪ್ರಾಧಿಕಾರಕ್ಕೆ ಹೋಗುವಂತೆ ಮಾಡಲಾಗುತ್ತದೆ. ಬಿಡಿಎ ವ್ಯಾಪ್ತಿಯಲ್ಲಿ ಈ ನಿಯಮದ ವಿರುದ್ಧ ರೈತರು ನ್ಯಾಯಾಲಯದ ಮೆಟ್ಟಿಲೇರಿದಾಗ 50:50 ಅನುಪಾತದ ಸೂತ್ರವನ್ನು 2020ರಲ್ಲಿ ಬೆಂಗಳೂರಿಗೆ ಅನ್ವಯಿಸುವಂತೆ ಮಾತ್ರ ತರಲಾಗುತ್ತದೆ. 2021ರಲ್ಲಿ ಮುಡಾ ಸಂಸ್ಥೆ ಕೂಡ ಇದೇ ರೀತಿ 50:50 ಅನುಪಾತದಲ್ಲಿ ಭೂಮಿ ಹಂಚಿಕೆಗೆ ನಿರ್ಣಯ ಹೊರಡಿಸಲಾಗುತ್ತದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳದೇ 3 ಎಕರೆ 26 ಗುಂಟೆ ಜಾಗವನ್ನು ಉಪಯೋಗಿಸಿಕೊಂಡಿರುವ ಅನ್ವಯ 50:50 ಅನುಪಾತದಲ್ಲಿ ನಿವೇಶನ ಪರಿಹಾರ ರೂಪದಲ್ಲಿ ಮಂಜೂರು ಮಾಡಲಾಗಿದೆ ಎಂದು ಮುಡಾ ವತಿಯಿಂದ ಪಾರ್ವತಮ್ಮ ಅವರಿಗೆ ಪತ್ರ ನೀಡಲಾಗಿದೆ. ಪ್ರಾಧಿಕಾರಕ್ಕೆ ಇದೇ ಜಾಗದಲ್ಲಿ ನಿವೇಷನ ನೀಡಿ ಎಂದು ಕೇಳಿಲ್ಲ. ಪ್ರಾಧಿಕಾರವೇ ತನ್ನ ಸ್ವಂತ ನಿರ್ಧಾರದ ಮೇಲೆ 14 ನಿವೇಶನಗಳನ್ನು ವಿಜಯನಗರ ಮೂರು ಹಾಗೂ ನಾಲ್ಕನೇ ಹಂತದಲ್ಲಿ ನೀಡಿದ್ದಾರೆ.  
 
ಕಾನೂನಿನಲ್ಲಿ ಭೂಸ್ವಾಧೀನ ಮಾಡಿದ ಜಾಗದಲ್ಲೇ ಬದಲಿ ಜಾಗ ನೀಡಬೇಕು ಎಂದು ಇದೆ. ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಪ್ರಕಾರ ಬೇರೆ ಜಾಗದಲ್ಲೂ ನಿವೇಶನ ಹಂಚಲು ಅವಕಾಶವಿದೆ. ಅದರ ಪ್ರಕಾರ ಪಾರ್ವತಮ್ಮ ಅವರಿಗೆ ನಿವೇಶನ ನೀಡಿದ್ದಾರೆ. ಪಾರ್ವತಮ್ಮನವರು ಇಂತಹುದೇ ಜಾಗದಲ್ಲಿ ನಿವೇಶನ ಬೇಕು ಎಂದು ಅರ್ಜಿ ಹಾಕಿಲ್ಲ. 
 
ವಿಜಯೇಂದ್ರ ಹಾಗೂ ಅಶೋಕ್ ಅವರಿಗೆ ಮಾನ ಮರ್ಯಾದೆ ಇದ್ದರೆ, ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡು ಈ ನಿವೇಶನ ಕೊಡಿಸಿದ್ದರೆ ಅದಕ್ಕೆ ಪೂರಕವಾಗಿರು ದಾಖಲೆಯನ್ನು ಮುಂದಿಟ್ಟು ಮಾತನಾಡಲಿ. ಈ ಮುಡಾ ಕರ್ಮಾಕಾಂಡ ಬಿಜೆಪಿ ಸರ್ಕಾರದ್ದು. ಅಶೋಕ್ ಅವರೇ ನೀವು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅನರ್ಹರು. ನೀವು ಹೇಳಿದಂತೆ 60 ನಿವೇಶನ ಎಲ್ಲಿ ಕೊಟ್ಟಿದ್ದಾರೆ.
 
ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಲು ಸಿಎಂ ನಿವಾಸ ಮುತ್ತಿಗೆ ಹಾಕುತ್ತಿದ್ದಾರೆ. ವಿಜಯೇಂದ್ರ ಅವರೇ ನಿಮ್ಮ ತಂದೆ ಸಿಎಂ ಆಗಿದ್ದಾಗ ನೀವು ಪರ್ಯಾಯ ಸರ್ಕಾರ ನಡೆಸುತ್ತಿದ್ದಿರಿ. ಸಂಪುಟದಲ್ಲಿ 34 ಸಚಿವರೂ ನಿಮ್ಮವರನ್ನೇ ಇಟ್ಟುಕೊಂಡು ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿ ಸರ್ಕಾರ ನಡೆಸುತ್ತಿದ್ದವರು ನೀವು. ಮಾರಿಷಿಯಸ್ ನ ಬ್ಯಾಂಕ್ ಗಳಲ್ಲಿರುವ ಖಾತೆಗಳಲ್ಲಿ ಎಷ್ಟೆಷ್ಟು ಹಣ ಇದೆ ಎಂದು ಹೇಳಿ. ಗಾಜಿನ ಮನೆಯಲ್ಲಿ ಕೂತು ಸಿದ್ದರಾಮಯ್ಯ ಹಾಗೂ ಅವರ ಧರ್ಮಪತ್ನಿ ಬಗ್ಗೆ ಮಾತನಾಡುತ್ತೀರಾ?
 
ಇನ್ನು ಮೈಸೂರು ಉಪಆಯುಕ್ತರು 16 ಪತ್ರ ಬರೆದಿದ್ದರೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಅವರು ಯಾರ ವಿರುದ್ಧ ಪತ್ರ ಬರೆದಿದ್ದರು? ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2020, 2021, 2022ರಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಪಚ್ರ ಬರೆದಿದ್ದಾರೆ. ಅವರ ಪತ್ರದಲ್ಲಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಆರೋಪ ಮಾಡಿದ್ದರು. ಈ ಪತ್ರದ ಆಧಾರದ ಮೇಲೆ ಸಿದ್ದರಾಮಯ್ಯ ಅವರು ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದ ಸಮಿತಿ ಮಾಡಿ ತನಿಖೆ ನಡೆಸಲಾಗುತ್ತಿದೆ.
 
ಮೂಡಾದಲ್ಲಿ 5 ಸಾವಿರ ಕೋಟಿಯಷ್ಟು ಅಕ್ರಮ ನಡೆದಿದ್ದರೆ ಅದೆಲ್ಲವೂ ಬಿಜೆಪಿ ಆಡಳಿತ ಅವಧಿಯಲ್ಲಿ ಆಗಿರುವ ಅಕ್ರಮ. ಪಾರ್ವತಮ್ಮ ಅವರು ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಅದನ್ನು ಮಾಧ್ಯಮಗಳ ಮುಂದೆ ಇಡಿ. ಇಲ್ಲದಿದ್ದರೆ ನೀವು ಸಾರ್ವಜನಿಕವಾಗಿ ಇರಲು ನೈತಿಕತೆ ಇರುವುದಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಅಶೋಕ್ ಅವರೇ ನೀವು ರಾಜಕೀಯಕ್ಕೆ ಬರುವ ಮುನ್ನ ಇದ್ದ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಎಂದು ಹೇಳುತ್ತೀರಾ? ಈಗ ಅದು ಎಷ್ಟಾಗಿದೆ? ನಿಮ್ಮ ಬೇನಾಮಿ ಆಸ್ತಿ ಎಷ್ಟಿದೆ ಎಂದು ಮುಂದಿನ ದಿನಗಳಲ್ಲಿ ಒಂದೊಂದಾಗಿ ಬಿಚ್ಚಿಡುತ್ತೇವೆ. ಇವುಗಳ ಬಗ್ಗೆ ತನಿಖೆ ಮಾಡಿಸಿ ಮುಟ್ಟುಗೋಲು ಹಾಕಿಸುತ್ತೇವೆ. ವಿರೋಧ ಪಕ್ಷ ನಾಯಕನಾಗಿ ನಿಮ್ಮ ಮಾತಿನಲ್ಲಿ ನಿಜ ಇರಬೇಕಲ್ಲವೇ? ವಿರೋಧ ಪಕ್ಷದ ನಾಯಕ ಎಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸರಿಸಮನಾದ ಸ್ಥಾನ. ಸಿದ್ದರಾಮಯ್ಯ ಅವರೂ ಕೂಡ ವಿರೋಧ ಪಕ್ಷದ ನಾಯಕರಾಗಿದ್ದರು. ನಿಮ್ಮಂತೆ ಹುಚ್ಚನ ರೀತಿ ಮಾತನಾಡುತ್ತಿರಲಿಲ್ಲ. ನೀವು ಮಾತೆತ್ತಿದರೆ ಸುಳ್ಳನ್ನೇ ಆಡುತ್ತೀರಿ. ವಿರೋಧ ಪಕ್ಷದ ನಾಯಕ ಸ್ಥಾನದಿಂದ ನಿಮ್ಮನ್ನು ತೆಗೆಯುತ್ತಾರೆ ಎಂಬ ಭಯದಲ್ಲಿ ದಿನಬಳಗಾದರೆ ಸುಳ್ಳು ಆರೋಪ ಮಾಡುತ್ತಿದ್ದೀರಿ. ನೀವು ಆರೋಪ ಮಾಡುವುದಲ್ಲ, ದಾಖಲೆ ಸಮೇತ ಮಾತನಾಡಬೇಕು. 
 
ಮುಂಬರುವ ಅಧಿವೇಶನದಲ್ಲಿ ನೀವು ಈ ವಿಚಾರವಾಗಿ ಮಾತನಾಡಿ. ಸಿದ್ದರಾಮಯ್ಯನವರು ಕೇವಲ ಒಂದೇ ಒಂದು ಸಾಲಿನಲ್ಲಿ ಉತ್ತರ ನೀಡುತ್ತಾರೆ. ಬಿಜೆಪಿ ಕಾರ್ಯಕರ್ತನೇ ಅಶೋಕ್ ಅವರು 2010ರಲ್ಲಿ ನನ್ನನ್ನು ಮೇಯರ್ ಮಾಡುವುದಾಗಿ ಹೇಳಿ 10 ಕೋಟಿ ಹಣ ಪಡೆದಿದ್ದರು. ಆದರೆ ಹಣವೂ ವಾಪಸ್ ನೀಡಲಿಲ್ಲ, ಮೇಯರ್ ಸ್ಥಾನವನ್ನು ನೀಡಲಿಲ್ಲ ಎಂದು ಹೇಳಿಕೆ ನೀಡಿರುವ ದಾಖಲೆ ನಮ್ಮ ಬಳಿ ಇವೆ. 
 
ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ನಾವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಪ್ರಕರಣದ ಬಗ್ಗೆ ಕೇಳುವಾಗ ದೂರದಿಂದಲೇ ಟಾ ಟಾ ಬೈ ಬೈ ಎಂದು ತೆರಳಿದ ಸಿಎಂ ಸಿದ್ದರಾಮಯ್ಯ