Publish Date: Sun, 06 Nov 2022 (11:13 IST)
Updated Date: Sun, 06 Nov 2022 (11:40 IST)
ಬೆಂಗಳೂರು : ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು ಎನ್ನುವ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರ ಹೇಳಿಕೆಯನ್ನು ಮಾಜಿ ಶಾಸಕ ಯು.ಟಿ ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಬಿ.ಟಿ.ಲಲಿತಾ ನಾಯಕ್ ಅವರೇ ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ ದೈವ ನರ್ತಕರಿಗೆ ನೀಡಿರುವ ಮಾಶಾಸನ ಸರಿ ಅಲ್ಲ ಎಂಬ ಮಾತನ್ನ ನಾನು ಒಪ್ಪಲು ಸಿದ್ದವಿಲ್ಲ.
ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ. ಮೊದಲು ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ ಹಾಗೂ ಕರಾವಳಿ ಸಂಸ್ಕೃತಿಯನ್ನ ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರು ಚಿಂತನೆ ಮಾಡುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ.