Select Your Language

Notifications

webdunia
webdunia
webdunia
webdunia

ರುದ್ರಣ್ಣ ಆತ್ಮಹತ್ಯೆಗೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕು: ಬಿಜೆಪಿ ಆಗ್ರಹ

N Ravikumar

Krishnaveni K

ಬೆಂಗಳೂರು , ಮಂಗಳವಾರ, 5 ನವೆಂಬರ್ 2024 (15:13 IST)
ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಕಾರ್ಯದರ್ಶಿ ಸೋಮು ತಮ್ಮ ಆತ್ಮಹತ್ಯೆಗೆ ಕಾರಣವೆಂದು ಪತ್ರ ಬರೆದಿಟ್ಟು ಎಸ್.ಡಿ.ಎ. ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರಣ್ಣ ಆತ್ಮಹತ್ಯೆಯ ಹೊಣೆ ಹೊತ್ತು ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕೆಂದು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಒತ್ತಾಯಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅನೇಕ ದಿನಗಳಿಂದ ನೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರುದ್ರಣ್ಣ ವಾಟ್ಸಪ್ ಸಂದೇಶ ಕಳಿಸಿದ್ದಾರೆ. ನನ್ನ ಸಾವಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಕಾರ್ಯದರ್ಶಿ ಕಾರಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಸಂದರ್ಭದಲ್ಲೂ ಇದೇಮಾದರಿ ಪತ್ರ ಬರೆದಿಡಲಾಗಿತ್ತು ಎಂದು ವಿವರಿಸಿದರು. ಹೇಗೆ ಈಶ್ವರಪ್ಪ ಅವರು ರಾಜೀನಾಮೆ ಕೊಟ್ಟಿದ್ದರೋ ಅದೇ ಮಾದರಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕೆಂದು ತಿಳಿಸಿದರು.
 
ವಕ್ಫ್ ಮಂಡಳಿ ಏನು ಮಾಡಿದರೂ ಮಾಫಿ...
ಟಿಪ್ಪು ಸುಲ್ತಾನ್, ಔರಂಗಬೇಬ, ಚಂಗೇಶ್ ಖಾನ್, ಹುಮಾಯೂನ್ ಮೊದಲಾದವರು ನಮ್ಮ ದೇಶದ ಮೇಲೆ ದಾಳಿ ಮಾಡಿ ಆಸ್ತಿ ವಶಕ್ಕೆ ಪಡೆದ ಮಾದರಿಯಲ್ಲಿ ರಾಜ್ಯದಲ್ಲಿ ವಕ್ಫ್ ಮಂಡಳಿಯು ರೈತರ ಜಮೀನು, ಶಾಲೆ, ಮಠ ಮಂದಿರಗಳನ್ನು ವಕ್ಫ್ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತಿದೆ. ವಕ್ಫ್ ಮಂಡಳಿ ಏನು ಮಾಡಿದರೂ ಮಾಫಿ, ಏನು ಮಾಡಿದರೂ ನಡೆಯುತ್ತದೆ ಎಂಬಂತೆ ವಕ್ಫ್ ಸಚಿವ ಜಮೀರ್ ಅಹಮದ್ ಅವರನ್ನು ಈ ಸರಕಾರ ಫ್ರೀಯಾಗಿ ಬಿಟ್ಟಿದೆ ಎಂದು ಟೀಕಿಸಿದರು.
 
ವಕ್ಫ್ ಅನ್ನು ಬರ್ಖಾಸ್ತು ಮಾಡಬೇಕು..
ಮುಖ್ಯಮಂತ್ರಿಗಳು ವಕ್ಫ್ ಅನ್ನು ಬರ್ಖಾಸ್ತು ಮಾಡಬೇಕು ಎಂದು ಎನ್.ರವಿಕುಮಾರ್ ಅವರು ಆಗ್ರಹವನ್ನು ಮುಂದಿಟ್ಟರು. ವಕ್ಫ್ ಸಚಿವ ಜಮೀರ್ ಅಹಮದ್ ಅವರ ಸಚಿವ ಸ್ಥಾನ, ಶಾಸಕ ಸ್ಥಾನಕ್ಕೂ ರಾಜೀನಾಮೆ ಪಡೆಯಬೇಕು. ರಾಜ್ಯದಲ್ಲಿ ಎಲ್ಲೂ ಅವರು ಪ್ರವಾಸ ಮಾಡಬಾರದು ಎಂದು ಆಗ್ರಹಿಸಿದರು.

ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳನ್ನೂ ವಕ್ಫ್ ಆಸ್ತಿಯೆಂದು ಘೋಷಿಸುತ್ತಿದ್ದಾರೆ. ಯಾಕೆ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ. ನೋಟಿಸ್ ಹಿಂದೆಗೆತ ಸ್ವಾಗತಾರ್ಹ. ಆದರೆ, ನೋಟಿಸ್ ಹಿಂದಕ್ಕೆ ಪಡೆದ ತಕ್ಷಣ ಅವೆಲ್ಲ ಹಿಂದೂಗಳ ಆಸ್ತಿಗಳಾಗುತ್ತವೆಯೇ? ಎಂದು ಪ್ರಶ್ನಿಸಿದರು.
 
ನಿಜಾಮರು ಆಳ್ವಿಕೆ ಮಾಡಿದಲ್ಲೆಲ್ಲ ವಕ್ಫ್ ಸಮಸ್ಯೆ ಇದೆ. ವಕ್ಫ್ ಸಂಬಂಧ ವಿಧಾನಸಭೆ- ವಿಧಾನಪರಿಷತ್ತಿನ ಜಂಟಿ ಸದನ ಸಮಿತಿ ರಚಿಸಿ ತನಿಖೆ ಮಾಡಿ ಎಂದು ಒತ್ತಾಯಿಸಿದರು. 47 ಸಾವಿರ ಎಕರೆ ಜಮೀನುಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದ ಅವರು, ಅಧಿಕಾರಿಗಳು ತಪ್ಪು ಮಾಡಿದ್ದಾರೆಂದು ಹೇಳುತ್ತಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣದಲ್ಲೂ ಇದೇ ಮಾತು ಹೇಳುತ್ತಾರೆ. ವಕ್ಫ್ ವಿಚಾರದಲ್ಲೂ ಇದೇ ಮಾತು. ಸಚಿವರು, ಮುಖ್ಯಮಂತ್ರಿಗಳು ಬಹಳ ಸಾಚಾ. ನಿಮ್ಮ ನಿರ್ದೇಶನ ಇಲ್ಲದೆ ಅಧಿಕಾರಿಗಳು ಹೇಗೆ ತಪ್ಪು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ತಪ್ಪು ಮಾಡುವ ಅಧಿಕಾರಿಗಳನ್ನು ವಜಾ ಮಾಡಿ ಎಂದು ಒತ್ತಾಯವನ್ನು ಮುಂದಿಟ್ಟರು.

ವಕ್ಫ್ ದೊಡ್ಡದೇ? ಸುಪ್ರೀಂ ಕೋರ್ಟ್ ದೊಡ್ಡದೇ? ವಕ್ಫ್ ದೊಡ್ಡದೇ? ಹೈಕೋರ್ಟ್ ದೊಡ್ಡದೇ? ವಕ್ಫ್ ತೀರ್ಮಾನ ಅಂತಿಮವೇ? ಸುಪ್ರೀಂ ಕೋರ್ಟ್ ತೀರ್ಮಾನ ಅಂತಿಮವೇ?  ವಕ್ಫ್ ತೀರ್ಮಾನ ಅಂತಿಮವೇ? ಹೈಕೋರ್ಟ್ ತೀರ್ಮಾನ ಅಂತಿಮವೇ? ಎಂದೂ ಅವರು ಕೇಳಿದರು. ವಕ್ಫ್ ಅಂಧಾ ದರ್ಬಾರ್, ಚೆಲ್ಲಾಟದ ವಿರುದ್ಧ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕೆಂದೂ ಅವರು ತಿಳಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ವಕ್ಫ್‌ ವಿವಾದ: ಜಮೀರ್‌ ಹೇಳಿಕೆಗಳಿಗೆ ಕಡಿವಾಣ ಹಾಕಲು ಹೈಕಮಾಂಡ್‌ಗೆ ಕೈ ಶಾಸಕರ ಪತ್ರ