ಬೆಂಗಳೂರು: ಕರ್ನಾಟಕದಲ್ಲಿ ಮಳೆ, ಮೋಡ ಕವಿದ ವಾತಾವರಣ ಜೊತೆಗೆ ವಿಪರೀತ ಚಳಿ ಎಲ್ಲವೂ ಒಂದೇ ದಿನ ಕಂಡುಬರುತ್ತಿದೆ. ಮುಂದಿನ ಮೂರು ದಿನಗಳ ಕಾಲ ಈ ಕಾರಣಕ್ಕೆ ಎಚ್ಚರವಾಗಿರಬೇಕು ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯ ರಾಜಧಾನಿಯಲ್ಲಿ ನಿನ್ನೆ ರಾತ್ರಿ ಸಣ್ಣ ಮಳೆಯಾಗಿದೆ. ಬೆಳಿಗ್ಗೆ ಕೊಂಚ ಮೋಡ ಕವಿದ ವಾತಾವರಣವಿತ್ತು. ಇಂದೂ ಮೋಡ ಕವಿದ ವಾತಾವರಣ, ಶೈತ್ಯ ಹವಾಗುಣ ಮುಂದುವರಿಯುವ ನಿರೀಕ್ಷೆಯಿದೆ. ಜೊತೆಗೆ ವಿಪರೀತ ಚಳಿಯ ವಾತಾವರಣವಿದೆ.
ಇನ್ನು, ಉತ್ತರ ಕರ್ನಾಟಕದಲ್ಲಿ ವಿಪರೀತ ಚಳಿಯಿರಲಿದ್ದು, ಮುಂದಿನ ಮೂರು ದಿನಗಳ ಕಾಲ ಶೀತ ಅಲೆಯಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್ ನಲ್ಲಿ ಶೀತ ಅಲೆಯ ಕಾರಣಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆದಷ್ಟು ಮುಂಜಾನೆ ಮತ್ತು ಮುಸ್ಸಂಜೆಯ ಹೊತ್ತಿನಲ್ಲಿ ಹೊರಗೆ ಓಡಾಡದೇ ಇರುವುದು ಉತ್ತಮ ಎನ್ನಲಾಗಿದೆ.
ತಾಪಮಾನ ಇದ್ದಕ್ಕಿದ್ದಂತೆ 7 ಡಿಗ್ರಿಗೆ ಇಳಿಕೆಯಾಗಿದ್ದು ಅಪಾಯಕಾರಿಯಾಗಿದೆ. ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯಾಸ್ತದ ಬಳಿಕ ವಾಕಿಂಗ್ ಮಾಡುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ವಿಪರೀತ ಚಳಿಯಿಂದ ರಕ್ಷಿಸಿಕೊಳ್ಳಲು ಜನ ರಸ್ತೆ ಬದಿಯಲ್ಲೇ ಬೆಂಕಿ ಹಚ್ಚಿ ಗುಂಪು ಗುಂಪಾಗಿ ಚಳಿ ಕಾಯಿಸುವ ಪರಿಸ್ಥಿತಿಯಿದೆ. ಮುಂದಿನ ಮೂರು ದಿನಗಳ ಕಾಲ ಈ ವಾತಾವರಣ ಮುಂದುವರಿಯಲಿದೆ.