ಬೆಂಗಳೂರು: ಕರ್ನಾಟಕದಲ್ಲಿ ಸತತ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಇಂದು ಮಳೆಯ ಆಗಮನದ ಸುದ್ದಿ ಕೇಳಿಬಂದಿದೆ. ಇಂದು ಮತ್ತು ನಾಳೆ ಎಷ್ಟು ಗಂಟೆಗೆ, ಎಲ್ಲೆಲ್ಲಿ ಮಳೆಯಾಗಲಿದೆ ಎಂಬ ವಿವರ ಇಲ್ಲಿದೆ ನೋಡಿ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿಪರೀತ ಬಿಸಿಲು, ಉಷ್ಣ ಅಲೆಯಿಂದ ಜನ ಬೇಸತ್ತು ಹೋಗಿದ್ದಾರೆ. ಇಂದೂ ಇಲ್ಲಿ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಇಂದು ಮತ್ತು ನಾಳೆ ಮಳೆಯಾಗುವ ಸೂಚನೆ ನೀಡಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಇಂದು ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಅಪರಾಹ್ನ 2 ಗಂಟೆಯ ಬಳಿಕ ಸಣ್ಣ ಮಟ್ಟಿಗೆ ಮಳೆಯಾಗುವ ಸೂಚನೆಯಿದೆ.
ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಾಳೆ ಮತ್ತು ಈ ವಾರಂತ್ಯದಲ್ಲಿ ಮಳೆಯ ಸೂಚನೆಯಿದೆ. ಹಾಗಿದ್ದರೂ ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 31 ರಿಂದ 32 ಡಿಗ್ರಿಯೊಳಗೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. ಈ ವಾರಂತ್ಯದಿಂದ ಮತ್ತೆ ತಾಪಮಾನ ಏರಿಕೆಯಾಗುವ ಸೂಚನೆಯಿದೆ.